ಉಡುಪಿ: ಕೇಂದ್ರ ಸರಕಾರದಿಂದ ದ್ವೇಷ ರಾಜಕಾರಣ ನಡೆಯುತ್ತಿದ್ದು, ವಿರೋಧಿಗಳ ಬಾಯಿ ಮುಚ್ಚಿಸುವ ವ್ಯವಸ್ಥಿತ ಹುನ್ನಾರ ಮಾಡುತ್ತಿದೆ ಎಂದು ಹಿರಿಯ ಕಾಂಗ್ರೆಸ್‌ ಮುಖಂಡ ಎಂ.ಎ ಗಫೂ‌ರ್ ಆರೋಪ ಮಾಡಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಗಫೂ‌ರ್, ಇದೀಗ ನ್ಯಾಷನಲ್ ಹೆರಾಲ್ಡ್ ಸಂಸ್ಥೆಯ ಹಣಕಾಸು ವ್ಯವಹಾರವನ್ನು ಕೆದಕಿ ವಿರೋಧಿಗಳ ಬಾಯಿ ಮುಚ್ಚಿಸುವ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿದೆ. ಇದರ ಭಾಗವಾಗಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದೆ. ಹಾಗೆ ನೋಡಿದರೆ ನ್ಯಾಷನಲ್ ಹೆರಾಲ್ಡ್ ಸಂಸ್ಥೆಯ ಉದ್ಯೋಗಿಗಳಾಗಲೀ ಕಾರ್ಮಿಕರಾಗಲೀ ಯಾವುದೇ ದೂರು ಸಲ್ಲಿಸಿಲ್ಲ.

ಆದರೆ, ಕೇಂದ್ರ ಸರಕಾರ ಇಡಿ ಮೂಲಕ ಸಂಸ್ಥೆಯಲ್ಲಿ ಹಣಕಾಸಿನ ಅವ್ಯವಹಾರ ಆಗಿದೆ ಎಂಬಂತೆ ಬಿಂಬಿಸುವ ಪ್ರಯತ್ನ ಆಗುತ್ತಿದೆ. ಇವತ್ತು ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಅರ್ಥ ವ್ಯವಸ್ಥೆ ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಆದ್ದರಿಂದ ಜನರ ಗಮನ ಬೇರೆಡೆ ಸೆಳೆಯುವ ಸಲುವಾಗಿ ಇಡಿ, ಐಟಿ, ಸಿಬಿಐ ಮೂಲಕ ವಿರೋಧಿಗಳನ್ನು ಹಣಿಯುವ ಕೆಲಸ ಮಾಡುತ್ತಿದೆ ಎಂದು ಆರೋಪ ಮಾಡಿದ್ದಾರೆ.