ಉಡುಪಿ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಷ್ಟ್ರ ಮಟ್ಟದ 30 ಗಂಟೆಗಳ ಹ್ಯಾಕಥಾನ್ “ಹ್ಯಾಕೋತ್ಸವ 2025” ರ ಉದ್ಘಾಟನಾ ಸಮಾರಂಭವು 03 ನವೆಂಬರ್ 2025ರಂದು ಕಾಲೇಜಿನ ಆವರಣದಲ್ಲಿ ನಡೆಯಿತು.
ಸಮಾರಂಭದಲ್ಲಿ ಫೆರ್ನಾಂಡಿಸ್ ಗ್ರೂಪ್ನ ಸಂಸ್ಥಾಪಕರಾದ ಶ್ರೀ ವಿಲ್ಸನ್ ಫೆರ್ನಾಂಡಿಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಇವರು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿ ಸವಾಲುಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ತಿಳಿಸಿಕೊಟ್ಟರು. ವಿಫಲತೆ ಅಂತ್ಯವಲ್ಲ ಅದು ಯಶಸ್ಸಿನ ಒಂದು ಮೆಟ್ಟಿಲು ಎಂದರು.

ವಿದ್ಯಾರ್ಥಿಗಳು ನಿರಂತರ ಕಲಿಕೆ ಮತ್ತು ಹೊಸತನದತ್ತ ಹೆಜ್ಜೆ ಹಾಕಬೇಕೆಂದು ತಿಳಿಸಿದರು. ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಡಾ. ರಾಧಾಕೃಷ್ಣ ಎಸ್ ಐತಾಳ್ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಷ್ಟ್ರ ಮಟ್ಟದ ಹ್ಯಾಕಥಾನ್ ಅನ್ನು ಆಯೋಜಿಸುವಲ್ಲಿ ಸಂಸ್ಥೆಯ ವಿದ್ಯಾರ್ಥಿಗಳ ತ್ಯಾಗ ಮತ್ತು ನಿಷ್ಠೆಯನ್ನು ಅಭಿನಂದಿಸಿದರು. ಇಂತಹ ಕಾರ್ಯಕ್ರಮವು ಯುವ ಮನಸ್ಸುಗಳಲ್ಲಿ ನವೀನತೆ, ಸಹಕಾರ ಮತ್ತು ಸಮಸ್ಯೆ ಪರಿಹಾರ ಕೌಶಲ್ಯಗಳನ್ನು ಉತ್ತೇಜಿಸುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಡೀನ್ ಡಾ. ನಾಗರಾಜ್ ಭಟ್, ಕಾರ್ಯಕ್ರಮದ ಸಂಯೋಜಕರಾದ ಶ್ರೀ ಚಂದ್ರಶೇಖರ ರಾವ್ ಕುತ್ಯಾರ್, ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಉಪಸ್ಥಿತರಿದ್ದರು. ದೇಶದ ವಿವಿಧ ಕಾಲೇಜುಗಳಿಂದ ಸುಮಾರು 400 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

