ಉಡುಪಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸರಕಾರಿ ಸಾರಿಗೆ ನೌಕರರು ಮಂಗಳವಾರ ರಾಜ್ಯಾದ್ಯಂತ ಮುಷ್ಕರ ಹಮ್ಕಿಕೊಂಡಿದ್ದು, ಸರಕಾರಿ ಬಸ್ ನೌಕರರ ಮುಷ್ಕರಕ್ಕೆ ಉಡುಪಿ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಉಡುಪಿ ಬನ್ನಂಜೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ನಗರದ ನರ್ಮ್ ಬಸ್ ನಿಲ್ದಾಣ ಹಾಗೂ ಕುಂದಾಪುರ ಬಸ್ ನಿಲ್ದಾಣಗಳಿಂದ ಹೊರಡುವ ಬಸ್ ಗಳ ಸಿಬ್ಬಂದಿ ಬೆಳಿಗ್ಗೆ 8ಗಂಟೆಯವರೆಗೆ ಬಸ್ ಗಳನ್ನು ರಸ್ತೆಗೆ ಇಳಿಸದೇ ಮುಷ್ಕರ ದಲ್ಲಿ ಪಾಲ್ಗೊಂಡಿದ್ದರು. ಬಳಿಕ ಅಧಿಕಾರಿಗಳ ಸೂಚನೆಯಂತೆ ಬಸ್ ಸಂಚಾರವನ್ನು ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.
ಅದರಂತೆ ಉಡುಪಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಹೊರ ಜಿಲ್ಲೆಗೆ ಹೊರಡುವ 35 ಬಸ್ ಗಳ ಪೈಕಿ ಮಧ್ಯಾಹ್ನ 12ಗಂಟೆಯವರೆಗೆ 28 ಬಸ್ ಗಳು ಹೊರಟಿವೆ. ಏಳು ಬಸ್ ಗಳು ನಿಲ್ದಾಣದಲ್ಲಿಯೇ ಬಾಕಿ ಆಗಿತ್ತು. ಕ್ರಮೇಣ ಒಂದೊಂದೇ ಬಸ್ ಗಳು ಸಂಚಾರ ಆರಂಭಿಸುತ್ತಿರುವುದು ಕಂಡುಬಂದಿದೆ.
ಉಡುಪಿ ನರ್ಮ್ ಬಸ್ ನಿಲ್ದಾಣದಿಂದ 54 ಬಸ್ ಗಳ ಪೈಕಿ ಶೇ.70ರಷ್ಟು ಬಸ್ ಗಳು ಓಡಾಟ ನಡೆಸಿವೆ. ಜಿಲ್ಲೆಯೊಳಗಿನ ಎಲ್ಲ ಬಸ್ ಗಳು ಎಂದಿನಂತೆ ಸಂಚಾರ ನಡೆಸಿದರೆ, ಹೊರ ಜಿಲ್ಲೆಗೆ ಹೋಗುವ ಬಸ್ ಗಳು ಮುಂದೆ ಸಮಸ್ಯೆ ಆಗಬಹುದೆಂಬ ಕಾರಣಕ್ಕೆ ದಾರಿ ಮಧ್ಯೆಯ ನಿಲ್ದಾಣಗಳಲ್ಲಿ ಸಂಚಾರ ಸ್ಥಗಿತ ಗೊಳಿಸಿವೆ.
ಹೊರ ಜಿಲ್ಲೆಗಳಿಂದ ಬರುವ ಕೆಲವು ಬಸ್ ಗಳು ಜಿಲ್ಲೆಗೆ ಬಾರದೇ ಇರುವುದರಿಂದ ಸಾಕಷ್ಟು ಪ್ರಯಾಣಿಕರಿಗೆ ಸಮಸ್ಯೆಯಾಯಿತು. ಮುಷ್ಕರದ ಹಿನ್ನೆಲೆಯಲ್ಲಿ ಕುಂದಾಪುರ, ಉಡುಪಿ ನಿಲ್ದಾಣಗಳಲ್ಲಿ ಕೆಎಸ್ಆರ್ಪಿ, ಡಿಎಆರ್ ತುಕಡಿಗಳನ್ನು ನಿಯೋಜಿಸಿ ಭದ್ರತೆ ಒದಗಿಸಲಾಗಿತ್ತು.

