ಉಡುಪಿ: ಪಾಂಗಾಳದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಅಪರಿಚಿತ ವ್ಯಕ್ತಿಯ ಮೃತದೇಹದ ವಾರಸುದಾರರು ಹಲವು ದಿನಗಳಾದರೂ ಪತ್ತೆಯಾಗದ ಹಿನ್ನೆಲೆಯಲ್ಲಿ, ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಕಾಪುವಿನ ಪಕೀರ್ಣಕಟ್ಟೆ ರುದ್ರಭೂಮಿಯಲ್ಲಿ ಗೌರವಯುತವಾಗಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಕೆಲವು ದಿನಗಳ ಹಿಂದೆ ಪಾಂಗಾಳ ರಾಷ್ಟ್ರೀಯ ಹೆದ್ದಾರಿ 66ರ ಬದಿಯಲ್ಲಿರುವ ಅಂಗಡಿಯೊಂದರ ಒಳಗೆ ಅಪರಿಚಿತ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವ್ಯಕ್ತಿ ಮೃತಪಟ್ಟ ಸುಮಾರು ಹತ್ತು ದಿನಗಳಾಗಿರಬಹುದು ಎಂದು ಶಂಕಿಸಲಾಗಿತ್ತು. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಮೃತದೇಹವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದರು. ಮೃತರ ಹೆಸರು, ವಿಳಾಸ ಸೇರಿದಂತೆ ಯಾವುದೇ ಗುರುತು ಪತ್ತೆಯಾಗಿರಲಿಲ್ಲ.
ಮೃತರ ವಾರಸುದಾರರು ಕಾಪು ಪೊಲೀಸ್ ಠಾಣೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸುವಂತೆ ಸೂಚಿಸಲಾಗಿತ್ತು. ಆದರೆ, ಹಲವು ದಿನಗಳು ಕಳೆದರೂ ಯಾರೂ ಸಂಪರ್ಕಿಸದ ಹಿನ್ನೆಲೆಯಲ್ಲಿ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಅಂತ್ಯಸಂಸ್ಕಾರ ನಡೆಸಲಾಯಿತು.
ಇಲಾಖೆಯ ಮನವಿಗೆ ಸ್ಪಂದಿಸಿದ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಅಂತ್ಯಸಂಸ್ಕಾರದ ಜವಾಬ್ದಾರಿ ವಹಿಸಿ ಗೌರವಯುತವಾಗಿ ಅಂತಿಮ ವಿಧಿವಿಧಾನ ನೆರವೇರಿಸಿದರು. ಕಾಪು ಪೊಲೀಸ್ ಠಾಣೆಯ ಮುಖ್ಯ ಆರಕ್ಷಕ ಅರುಣ್ ಉಪ್ಪೂರು, ಸಿಬ್ಬಂದಿ ಶಿವ ನಾಯಕ್, ಫ್ಲವರ್ ವಿಷ್ಣು, ಕಾಪು ಪುರಸಭೆಯ ದಿನೇಶ್ ಗೊಲ್ಲ ಹಾಗೂ ಕಾರ್ಮಿಕರು ಸಹಕರಿಸಿದರು.

