ಉಡುಪಿ: ಸೆಲ್ಫೀ ಹುಚ್ಚಿನಲ್ಲಿ ಸಮುದ್ರ ಪಾಲಾಗುತ್ತಿದ್ದ ಐವರ ರಕ್ಷಣೆ ಮಾಡಿರುವ ಘಟನೆ ಉಡುಪಿಯ ಮರವಂತೆ ಸಮುದ್ರ ತೀರದಲ್ಲಿ ನಡೆದಿದೆ. ಸಾಲು ಸಾಲು ದುರಂತ ಸಂಭವಿಸಿದರು ಪ್ರವಾಸಿಗರು ಎಚ್ಚೆತ್ತುಕೊಳ್ಳಲಿಲ್ಲ. ಸೆಲ್ಫಿ ಹುಚ್ಚಿನಲ್ಲಿ ಸಮುದ್ರದ ಕಲ್ಲು ಬಂಡೆಗಳ ಮೇಲೆ ಹೋದಾಗ ಘಟನೆ ಸಂಭವಿಸಿದೆ.
ರಕ್ಕಸ ಅಲೆಗಳ ಹೊಡೆತಕ್ಕೆ ಐವರು ಪ್ರವಾಸಿಗರು ಸಮುದ್ರ ಪಾಲಾಗುತ್ತಿದ್ದರು. ಕೂಡಲೇ ಲೈಫ್ ಗಾರ್ಡ್ ಹಾಗು ಸ್ಥಳೀಯರಿಂದ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಪ್ರತ್ಯೇಕ ಕಾರ್ಯಚರಣೆಯಲ್ಲಿ ಬೆಂಗಳೂರು ಮೂಲದ ನಾಲ್ವರು ಹಾಗು ಗೋವಾ ಮೂಲದ ಓರ್ವ ಮಹಿಳೆಯನ್ನು ರಕ್ಷಣೆ ಮಾಡಲಾಯಿತು.
ಲೈಫ್ ಗಾರ್ಡ್ ಹಾಗು ಸ್ಥಳೀಯರ ಸಮಯ ಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದೆ. ಲೈಫ್ ಗಾರ್ಡ್ ಪೃಥ್ವಿರಾಜ್ ಒಪ್ಪಂದ, ಪ್ರಮೋದ್ ರಾಜ್ ಒಪ್ಪಂದ, ಬೀಚ್ ಉಸ್ತುವಾರಿ ಸುರೇಶ್ ಕೊಡೇರಿ, ಹಾಗು ಇಬ್ರಾಹಿಂ ಗಂಗೊಳ್ಳಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಜಿಲ್ಲಾಡಳಿತ, ಲೈಫ್ ಗಾರ್ಡ್ ಅಪಾಯದ ಎಚ್ಚರಿಕೆ ನೀಡಿದರೂ ಪ್ರವಾಸಿಗರು ಡೋಂಟ್ ಕೇರ್. ಉಡುಪಿ ಮಲ್ಪೆ ಸಮುದ್ರಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹಿನ್ನಲೆ ಮರವಂತೆಯಲ್ಲಿ ಹುಚ್ಚಾಟ ನಡೆಸಿದರು. ಹುಚ್ಚಾಟಗೈಯ್ಯುವ ಪ್ರವಾಸಿಗರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಸ್ಥಳೀಯರ ಆಗ್ರಹಿಸಿದರು. ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

