ಉಡುಪಿ: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ (ಕೆಎಂಸಿ)ಯಲ್ಲಿ ಮೊದಲ ಯಕೃತ್ತು (ಲಿವರ್) ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ದೀರ್ಘಕಾಲದ ಯಕೃತ್ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ 56 ವರ್ಷದ ವ್ಯಕ್ತಿಗೆ, ಮೃತ ದಾನಿ ಕಸಿ ಕಾರ್ಯಕ್ರಮದಡಿಯಲ್ಲಿ ಯಕೃತ್ತು ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಮಣಿಪಾಲ ಮಾಹೆಯ ಬೋಧನಾ ಆಸ್ಪತ್ರೆಗಳ ಸಿಒಒ ಡಾ. ಸುಧಾಕರ್ ಕಂಟಿಪುಡಿ ಹೇಳಿದರು.

ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಸ್ತ್ರಚಿಕಿತ್ಸೆಯ ನಂತರ ವಿಶೇಷ ಟ್ರಾನ್ಸ್‌ಪ್ಲಾಂಟ್ ಐಸಿಯುವಿನಲ್ಲಿ ಸೂಕ್ಷ್ಮ ನಿಗಾದೊಂದಿಗೆ ಚಿಕಿತ್ಸೆ ನೀಡಲಾಗಿದ್ದು, ರೋಗಿ ಸ್ಥಿರವಾಗಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಹೇಳಿದರು.

ಕಸ್ತೂರ್ಬಾ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ಪ್ರಾಧ್ಯಾಪಕ ಡಾ. ಶಿರನ್ ಶೆಟ್ಟಿ ಮತ್ತು ತಂಡವು ಆರಂಭಿಕ ಮೌಲ್ಯಮಾಪನವ ನಡೆಸಿದಾಗ, ಯಕೃತ್ ಕಸಿ ನಡೆಸಿದರೆ ಮಾತ್ರ ರೋಗಿ ಬದುಕುಳಿಯಲು ಸಾಧ್ಯ ಎಂಬುದು ಸ್ಪಷ್ಟವಾಯಿತು. ಬಳಿಕ ರೋಗಿಯನ್ನು ಎಚ್‌ಪಿಬಿ ಮತ್ತು ಲಿವರ್ ಮತ್ತು ಪ್ಯಾಂಕ್ರಿಯಾಟಿಕ್ ಟ್ರಾನ್ಸ್‌ಪ್ಲಾಂಟ್ ಸರ್ಜರಿಯ ಪ್ರಮುಖ ಸಲಹೆಗಾರ ಡಾ. ಜಯಂತ್ ರೆಡ್ಡಿ ನೇತೃತ್ವದ ಕಸಿ ತಂಡಕ್ಕೆ ಶಿಫಾರಸು ಮಾಡಲಾಯಿತು ಎಂದರು.

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಐಸಿಯು ತಂಡದೊಂದಿಗೆ ಡಾ. ಭರತ್ ಕುಮಾರ್ ಭಟ್ ಮತ್ತು ತಂಡವು ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ ಎಂದು ತಿಳಿಸಿದರು.

ಜಿಲ್ಲೆಯ ಜನರಿಗೆ ಸುಧಾರಿತ ಚಿಕಿತ್ಸೆಯನ್ನು ಮನೆಬಾಗಿಲಿಗೆ ತಲುಪಿಸುವ ಗುರಿ ಯಶಸ್ವಿಯಾಗಿದೆ. ಕೇವಲ ಚಿಕಿತ್ಸೆಯ ಗುಣಮಟ್ಟದ ಮೇಲೆ ಮಾತ್ರವಲ್ಲದೆ, ಅದನ್ನು ಜನ ಸಾಮಾನ್ಯರಿಗೆ ಕೈಗೆಟುಕುವಂತೆ ಮಾಡುವಲ್ಲಿಯೂ ಗಮನ ಹರಿಸಿದ್ದೇವೆ. ಪ್ರಮುಖ ವಿಮಾ ಕಂಪನಿಗಳು ಮತ್ತು ಸರ್ಕಾರದ ಆರೋಗ್ಯ ಯೋಜನೆಗಳ ಅಡಿಯಲ್ಲಿ ಅರ್ಹ ರೋಗಿಗಳು ಈ ಕಸಿ ಚಿಕಿತ್ಸೆಯ ಪ್ರಯೋಜನ ಪಡೆಯಬಹುದು ಎಂದು ಹೇಳಿದರು.

ಗ್ಯಾಸ್ಟ್ರೊಎಂಟರಾಲಜಿ ವಿಭಾಗದ ಡಾ. ಶಿರನ್​ ಶೆಟ್ಟಿ ಮಾತನಾಡಿ, ಮೊದಲು ಲಿವರ್​ ಕಸಿಗಾಗಿ ರೋಗಿಗಳು ಬೆಂಗಳೂರಿನಂತಹ ದೂರದ ನಗರಗಳಿಗೆ ಹೋಗಬೇಕಿತ್ತು. ಆದರೆ ಈಗ ಮಣಿಪಾಲದಲ್ಲೇ ಈ ಸೌಲಭ್ಯ ದೊರೆಯುತ್ತಿರುವುದರಿಂದ ತುರ್ತು ಸಮಯದಲ್ಲಿ ರೋಗಿಗಳಿಗೆ ಅನುಕೂಲವಾಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬೆಂಗಳೂರಿನ ಮಣಿಪಾಲ್​ ಆಸ್ಪತ್ರೆಯ ತಜ್ಞ ವೈದ್ಯ ಡಾ. ಜಯಂತ್​ ರೆಡ್ಡಿ, ಕಸ್ತೂರ್ಬಾ ಆಸ್ಪತ್ರೆಯ ಡಾ. ಭರತ್​ ಕುಮಾರ್​ ಭಟ್​, ಆಸ್ಪತ್ರೆಯ ವೈದ್ಯಕಿಯ ಅಧೀಕ್ಷಕ ಡಾ. ಅವಿನಾಶ್​ ಶೆಟ್ಟಿ, ಡಾ. ದೀಪ್ತಿ ರಾಮಚಂದ್ರ ಉಪಸ್ಥಿತರಿದ್ದರು.