ಮಂಡ್ಯ: ಹಳ್ಳಿಕಾರ್ ತಳಿಯ ಹಸುವಿಗೆ ಸೀಮಂತ ಮಾಡಿ ರೈತ ಕುಟುಂಬ ಸಂಭ್ರಮಿಸಿರುವ ಘಟನೆ ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್ ಗ್ರಾಮದಲ್ಲಿ ನಡೆದಿದೆ.
ತಮ್ಮ ಮನೆಯಲ್ಲಿ ಬೆಳೆದ ಹಳ್ಳಿಕಾರ್ ನ ಜೋಡಿ ಹಸುವಿಗೆ ಸೀಮಂತ ಮಾಡಿ ಸಂಭ್ರಮಾಚರಿಸಿದರು. ಯುವ ರೈತ ಹೇಮಂತ್ ಮನೆಯಲ್ಲಿ ಗರ್ಭಧರಿಸಿದ ಎರಡು ಹಸುವಿಗೆ ಶಾಸ್ತ್ರೋಕ್ತ ವಾಗಿ ಸೀಮಂತ ಶಾಸ್ತ್ರ ನೆರವೇರಿಸಿದರು.
ಹಸುಗಳ ಸೀಮಂತ ಶಾಸ್ತ್ರಕ್ಕೆ ನೆಂಟರಿಸ್ಟರು ಹಾಗು ಸ್ನೇಹಿತರನ್ನು ಕರೆದು ಒಬ್ಬಟ್ಟು ಊಟ ಹಾಕಿಸಿ ಸಂಭ್ರಮಿಸಿದರು. ಹಳ್ಳಿಕಾರ್ ತಳಿಯ ಹಸುಗಳ ಮೇಲೆ ಮಗ ಹೇಮಂತ್ ನ ಪ್ರೀತಿಗೆ ಶೇಖರ್ ಕುಟುಂಬ ಕೈ ಜೋಡಿಸಿದರು.
ಮನೆಯ ಮುಂದೆ ಶಾಮಿಯಾನ ಹಾಕಿಸಿ ವೇದಿಕೆ ನಿರ್ಮಿಸಿ ಹಸುಗಳಿಗೆ ಅಲಂಕಾರ ಮಾಡಿ ಸೀಮಂತ ನಡೆಸಿದರು. ತಟ್ಟೆ ತುಂಬುವ ಶಾಸ್ತ್ರದಿಂದ ಹಿಡಿದು ಆರತಿ ಬೆಳಗಿ ಸಂಪ್ರದಾಯದಂತೆ ಹಸುಗಳಿಗೆ ಸೀಮಂತ ನಡೆಯಿತು. ಪದವಿ ಓದ್ತಿರೋ ಯುವ ರೈತ ಹೇಮಂತ್ ಗೆ ಹಳ್ಳಿಕಾರ್ ತಳಿಯ ವಿಪರೀತ ಪ್ರೀತಿ-ವ್ಯಾಮೋಹ ಇದೆ.
ಆ ಕಾರಣಕ್ಕಾಗಿ ತನ್ನ ಮನೆಯಲ್ಲಿದ್ದ ಎರಡು ಹಳ್ಳಿಕಾರ್ ತಳಿಯ ಹಸುಗಳಿಗೆ ಕನಸು ನನಸು ಎಂದು ಹೇಮಂತ್ ಹೆಸರಿಟ್ಟಿದ್ದನು. ಆ ಎರಡು ಹಸುಗಳು ಗರ್ಭಧಾರಣೆ ಮಾಡಿಸಿ ಇಂದು ಆ ಹಸುಗಳಿಗೆ ಅದ್ದೂರಿ ಸೀಮಂತ ನಡೆಸಲಾಯಿತು. ಹಳ್ಳಿಕಾರ್ ತಳಿಯನ್ನು ಉಳಿಸಿ ಬೆಳೆಸಲು ಯುವ ರೈತ ಹೇಮಂತ್ ನಿಂದ ಕರೆ ನೀಡಲಾಯಿತು.

