ಉಡುಪಿ: ಅಬಕಾರಿ ಹಗರಣ ರಾಜ್ಯದಾದ್ಯಂತ ಸದ್ದು ಮಾಡುತ್ತಿದ್ದು, ಇದರ ಬೆನ್ನಲ್ಲೇ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವ ಸಮೀಪದ ಬಿಳಿಯಾರು ಧೂಮಾವತಿ ಸನ್ನಿಧಾನಕ್ಕೆ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ್ ಭೇಟಿ ಕೊಟ್ಟಿರುವುದು ಬಹಳಷ್ಟು ಗಮನಸೆಳೆದಿದೆ.
ಸಚಿವರ ಆಪ್ತ ಎನ್ನಲಾದ ಉಡುಪಿಯ ಬಿಳಿಯಾರು ಮೂಲದ ಜೀವನಶೆಟ್ಟಿ ಅವರ ಆಹ್ವಾನದ ಮೇರೆಗೆ ದೈವದ ನೇಮೋತ್ಸವಕ್ಕೆ ಸಚಿವರು ಪತ್ನಿಯೊಂದಿಗೆ ಆಗಮಿಸಿದ್ದಾರೆ. ದೈವದ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ನೂತನ ಗೋಪುರ ಹೊಸ ಕಟ್ಟಡವನ್ನು ಸಚಿವರು ಉದ್ಘಾಟಿಸಿದರು.

ಅಬಕಾರಿ ಹಗರಣದಲ್ಲಿ ಜೀವನ್ ಶೆಟ್ಟಿ ಹೆಸರು ಕೂಡ ಕೇಳಿಬಂದಿತ್ತು. ಉಡುಪಿ ಮೂಲದ ಜೀವನ್ ಅವರು ಸದ್ಯ ಧಾರವಾಡದಲ್ಲಿ ವೈನ್ ಮರ್ಚೆಂಟ್ ಅಸೋಸಿಯೇಷನ್ ಪದಾಧಿಕಾರಿಯಾಗಿದ್ದಾರೆ. ಅಬಕಾರಿ ಹಗರಣ ಕುರಿತಾದ ಆಡಿಯೋದಲ್ಲಿ ಜೀವನ್ ಶೆಟ್ಟಿ ಹೆಸರು ಕೇಳಿಬಂದಿತ್ತು. ಸಚಿವರ ಹೆಸರಲ್ಲಿ ಜೀವನ ಶೆಟ್ಟಿ ಕಿರುಕುಳ ನೀಡುತ್ತಾರೆ ಹಾಗೂ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು.
ಆದರೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ತಿಮ್ಮಾಪುರ್ ಅವರು, ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಹಾಗೆಯೇ, ತನ್ನ ಬಗ್ಗೆ ಅನಗತ್ಯ ಆರೋಪ ಮಾಡಲಾಗುತ್ತಿದೆ. ನಾನು ಏನು ಪ್ರತಿಕ್ರಿಯೆ ನೀಡಲ್ಲ ಎಂದು ಜೀವನ್ ಶೆಟ್ಟಿ ಹೇಳಿದ್ದಾರೆ.

