ಉಡುಪಿ: ವಿದ್ಯಾರ್ಥಿಗಳು ಅಂಕ ಗಳಿಸುವುದರ ಜೊತೆಗೆ ಸೇವಾ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕು. ಕೇವಲ ಸ್ಮರಣಶಕ್ತಿಯನ್ನು ವೃದ್ಧಿಸಿಕೊಂಡು ಅಂಕ ಗಳಿಸಿದರೆ ಅದು ಒಂದು ವಿಧದ ಸಾಧನೆ ಮಾತ್ರ ಆಗುತ್ತದೆ. ಪರಿಪೂರ್ಣವಾದ ಸಾಧನೆ ಆಗುವುದಿಲ್ಲ. ಸೇವೆಯ ಜೊತೆಗೆ ಅಂಕಗಳಿಸಿದಾಗ ಮಾತ್ರ ಪರಿಪೂರ್ಣ ಸಾಧನೆ ಮಾಡಲು ಸಾಧ್ಯ ಎಂದು ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಉಡುಪಿ ಇದರ ಆಶ್ರಯದಲ್ಲಿ ಕೃಷ್ಣಮಠದ ರಾಜಾಂಗಣದಲ್ಲಿ ಇಂದು ಹಮ್ಮಿಕೊಂಡಿದ್ದ 2024-25ನೇ ಸಾಲಿನ ರಾಜ್ಯಮಟ್ಟದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪ್ರತಿಭಾನ್ವಿತ ಸ್ಕೌಟ್ಸ್- ಗೈಡ್ಸ್ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ನಿಸ್ವಾರ್ಥ ಸೇವೆ ಮಾಡಲು ಪ್ರಯತ್ನಿಸಬೇಕು. ಫಲಾಪೇಕ್ಷೆ ಇಲ್ಲದೆ ಸೇವೆ ಮಾಡಬೇಕು. ಕೇವಲ ಬುದ್ಧಿಶಕ್ತಿಯ ಮೇಲೆ ಅಂಕ ನಿರ್ಧಾರವಾಗುವುದಾದರೆ ಎಲ್ಲ ಶ್ರೇಯಸ್ಸು ಕೃತಕ ಬುದ್ಧಿ ಮತ್ತೆ (ಎಐ) ಗೆ ಸಲ್ಲಬೇಕು. ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ನಿಜವಾಗಿ ಕೂಡ ಅಭಿನಂದನೆಗೆ ಅರ್ಹರು. ಅವರು ಅಂಕ ಗಳಿಸುವುದರ ಜೊತೆಗೆ ಸೇವಾ ಪಥವನ್ನು ಸ್ವೀಕರಿಸಿದ್ದಾರೆ ಎಂದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ, ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿದರು. ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಮುಖ್ಯ ಆಯುಕ್ತ ಜಯಕರ್ ಶೆಟ್ಟಿ ಇಂದ್ರಾಳಿ, ಜಿಲ್ಲಾ ಖಜಾಂಚಿ ಹರಿಪ್ರಸಾದ್ ರೈ, ಜಿಲ್ಲಾ ಸ್ಕೌಟ್ಸ್ ಆಯುಕ್ತ ಜನಾರ್ದನ ಕೊಡವೂರು, ಜಿಲ್ಲಾ ಕಾರ್ಯದರ್ಶಿ ಆನಂದ್ ಬಿ‌. ಅಡಿಗ, ಜಿಲ್ಲಾ ಗೈಡ್ಸ್ ಆಯುಕ್ತೆ ಜ್ಯೋತಿ ಜೆ. ಪೈ, ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಸುಮನ್ ಶೇಖರ್ ಉಪಸ್ಥಿತರಿದ್ದರು.