ಉಡುಪಿ: ದೇಶದಲ್ಲಿ ಉದ್ಯೋಗಾವಕಾಶ ಹಾಗೂ ಸಾಮಾಜಿಕ ಭದ್ರತೆಯನ್ನು ಹೆಚ್ಚಿಸಲು ಹಾಗೂ ಎಲ್ಲಾ ವಲಯಗಳಲ್ಲಿ ಉದ್ಯೋಗ ಸೃಷ್ಟಿಯನ್ನು ಬೆಂಬಲಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕೇಂದ್ರ ಸರಕಾರ ಉತ್ಪಾದನಾ ವಲಯದ ಮೂಲಕ ಉದ್ಯೋಗ ಸಂಬಂಧಿತ ಪ್ರೋತ್ಸಾಹಕ (ಇಎಲ್‌ಐ) ಯೋಜನೆಯ ಅನುಷ್ಠಾನಕ್ಕೆ ಅನುಮೋದನೆ ನೀಡಿದೆ ಎಂದು ಭವಿಷ್ಯ ನಿಧಿ ಸಂಘಟನೆಯ ಉಡುಪಿ ಪ್ರಾದೇಶಿಕ ಕಚೇರಿಯ ಭವಿಷ್ಯನಿಧಿ ಆಯುಕ್ತ ಶಶಿಕಾಂತ್ ದಹಿಯಾ ತಿಳಿಸಿದ್ದಾರೆ.

ಉಡುಪಿಯ ಪಿಎಫ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಈ ಯೋಜನೆ ಇದೇ ಬರುವ ಆಗಸ್ಟ್ ತಿಂಗಳ ಮೊದಲ ದಿನದಿಂದ ದೇಶಾದ್ಯಂತ ಜಾರಿ ಗೊಳ್ಳಲಿದೆ. ಆ.1ರಿಂದ ಹೊಸದಾಗಿ ಉದ್ಯೋಗ ಪಡೆಯುವವರಿಗೆ ಎರಡು ವರ್ಷ ಗಳ (2025-27ರವರೆಗೆ) ಅವಧಿಗೆ ಹಾಗೂ ಉದ್ಯೋಗದಾತರಿಗೆ ಇನ್ನೂ ಎರಡು ಹೆಚ್ಚುವರಿ ವರ್ಷಗಳಿಗೆ ಇದು ಅನ್ವಯಿಸಲಿದೆ ಎಂದರು.

ಈ ಯೋಜನೆಯ ಪ್ರಯೋಜನಗಳು 2025ರ ಆಗಸ್ಟ್ 01 ರಿಂದ 2027 ರ ಜುಲೈ 31ರ ನಡುವೆ ಸೃಷ್ಟಿಯಾದ ಉದ್ಯೋಗಗಳಿಗೆ ಅನ್ವಯವಾಗುತ್ತವೆ. ಈ ಯೋಜನೆಯಡಿಯಲ್ಲಿ, ಮೊದಲ ಬಾರಿಗೆ ಉದ್ಯೋಗಿ ಗಳು ಒಂದು ತಿಂಗಳ ವೇತನವನ್ನು (ರೂ. 15,000ದವರೆಗೆ) ಪಡೆಯುತ್ತಾರೆ. ಹೆಚ್ಚುವರಿ ಉದ್ಯೋಗ ಸೃಷ್ಟಿಸಲು ಉದ್ಯೋಗದಾತರಿಗೆ ಒಂದು ಅವಧಿಯಿಂದ ಎರಡು ವರ್ಷಗಳವರೆಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ಉತ್ಪಾದನಾ ವಲಯಕ್ಕೆ ಇನ್ನೂ ಎರಡು ವರ್ಷಗಳವರೆಗೆ ವಿಸ್ತೃತ ಪ್ರಯೋಜನ ನೀಡಲಾಗುತ್ತದೆ ಎಂದು ಪರಿವರ್ತನಾಧಿಕಾರಿ ಸುನಿಲ್ ರಾವ್ ವಿವರಿಸಿದರು.

ಈ ಯೋಜನೆಯಲ್ಲಿ ಎರಡು ವಿಭಾಗಗಳಿದ್ದು, ಮೊದಲ ಭಾಗ, ಮೊದಲ ಬಾರಿ ಉದ್ಯೋಗ ಪಡೆಯುವವರ ಮೇಲೆ ಹಾಗೂ ಎರಡನೇ ಭಾಗ ಉದ್ಯೋಗದಾತರ ಮೇಲೆ ಕೇಂದ್ರೀಕೃತವಾಗಿದೆ ಎಂದರು. ಇಪಿಎಫ್‌ಒದಲ್ಲಿ ನೋಂದಾಯಿಸಿಕೊಂಡ ಮೊದಲ ಬಾರಿಗೆ ಉದ್ಯೋಗಿಗಳಿಗೆ ಎರಡು ಕಂತುಗಳಲ್ಲಿ 15,000 ರೂ.ಗಳವರೆಗೆ ಒಂದು ತಿಂಗಳ ಇಪಿಎಫ್ ವೇತನವನ್ನು ನೀಡಲಾಗುತ್ತದೆ ಎಂದರು.

ಇದರಲ್ಲಿ ತಿಂಗಳಿಗೆ 15,000ದಿಂದ 1 ಲಕ್ಷ ರೂ.ಗಳವರೆಗೆ ಸಂಬಳ ಪಡೆಯುವ ಉದ್ಯೋಗಿಗಳು ಈ ಪ್ರೋತ್ಸಾಹಧನಕ್ಕೆ ಅರ್ಹರಾಗಿರುತ್ತಾರೆ. 6 ತಿಂಗಳ ಸೇವೆಯ ನಂತರ ಮೊದಲ ಕಂತನ್ನು ಪಾವತಿಸಲಾ ಗುವುದು ಮತ್ತು 12 ತಿಂಗಳ ಸೇವೆಯ ನಂತರ ಮತ್ತು ಉದ್ಯೋಗಿ ಆರ್ಥಿಕ ಸಾಕ್ಷರತಾ ಕಾರ್ಯಕ್ರಮ ವನ್ನು ಪೂರ್ಣಗೊಳಿಸಿದ ನಂತರ ಎರಡನೇ ಕಂತನ್ನು ಪಾವತಿಸಲಾಗುವುದು.

ಉಳಿತಾಯದ ಅಭ್ಯಾಸವನ್ನು ಉತ್ತೇಜಿಸಲು, ಪ್ರೋತ್ಸಾಹದ ಒಂದು ಭಾಗವನ್ನು ಠೇವಣಿ ಖಾತೆಯ ಉಳಿತಾಯ ಸಾಧನದಲ್ಲಿ ನಿಗದಿತ ಅವಧಿಗೆ ಇಡಲಾಗುತ್ತದೆ. ಮುಂದಿನ ದಿನಗಳಲ್ಲಿ ಉದ್ಯೋಗಿ ಅದನ್ನು ಹಿಂಪಡೆಯಬಹುದು ಎಂದರು.