ಉಡುಪಿ: ನಗರದಲ್ಲಿ ಹರಿಯುವ ಇಂದ್ರಾಣಿ ನದಿಯು ಎಲ್ಲೆಲ್ಲಿ ಕಲುಷಿತವಾಗುತ್ತಿದೆ ಎಂಬುದನ್ನು ಪತ್ತೆ ಹಚ್ಚಲು ಡ್ರೋನ್ ಸರ್ವೆ ನಡೆಸುವ ಚಿಂತನೆ ಇದೆ ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿಕೆ ತಿಳಿಸಿದ್ದಾರೆ.
ನಗರಸಭೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿ, ಇಂದ್ರಾಣಿ ನದಿ ಹರಿಯುವ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. ಯಾವ ರೀತಿ ನದಿಯನ್ನು ಸ್ವಚ್ಛಗೊಳಿಸುವುದು ಎಂದು ಪರಿಶೀಲನೆ ನಡೆಸಲಾಗುವುದು ಎಂದರು.
ನಗರಸಭೆ ಮಾಜಿ ಸದಸ್ಯ ಸುಂದರ್ ಜೆ. ಕಲ್ಯಾಡಿ ಮಾತನಾಡಿ, ಕುಂದಾಪುರ, ಮೊದಲಾದೆಡೆಗಳಿಂದಲೂ ತ್ಯಾಜ್ಯವನ್ನು ತಂದು ಇಂದ್ರಾಣಿ ನದಿಗೆ ಬಿಡಲಾಗುತ್ತಿದೆ. ಅದಕ್ಕೆ ಶೀಘ್ರ ಕಡಿವಾಣ ಹಾಕಬೇಕೆಂದು ಆಗ್ರಹಿಸಿದ್ದಾರೆ.
ಮಾಜಿ ಸದಸ್ಯ ವಿಜಯ್ ಕೊಡವೂರು ಮಾತನಾಡಿ, ಇಂದ್ರಾಣಿ ನದಿ ತೀರಾ ಕಲುಷಿತವಾಗಿರುವುದರಿಂದ ಕೊಡವೂರು ಭಾಗದಲ್ಲೂ ಸಮಸ್ಯೆಯಾಗುತ್ತಿದೆ. ನದಿಯ ಸಮೀಪ ವಾಸಿಸುವವರು ಸೊಳ್ಳೆ ಕಾಟದಿಂದಲೂ ಬೇಸತ್ತಿದ್ದಾರೆ ಎಂದರು.
ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಕಾಪು ಸೇರಿದಂತೆ ಎಲ್ಲೂ ತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪಿಸಲು ಜನರು ಬಿಡುತ್ತಿಲ್ಲ. ಈ ಕಾರಣಕ್ಕೆ ಅಲ್ಲಿನ ತ್ಯಾಜ್ಯವನ್ನು ಬೇರೆಡೆಗೆ ಕೊಂಡೊಯ್ದು ವಿಲೇವಾರಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮಾಜಿ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಮಾತನಾಡಿ, ನಗರದ ತೋಡುಗಳ ಹೂಳೆತ್ತುವ ಕಾಮಗಾರಿಯನ್ನು ಶೀಘ್ರ ಆರಂಭಿಸಬೇಕು ಇಲ್ಲದಿದ್ದರೆ ಮಳೆಗಾಲದಲ್ಲಿ ನೆರೆ ಸಮಸ್ಯೆ ಕಾಡಲಿದೆ ಎಂದು ಹೇಳಿದರು.
ಅದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಮಹಾಂತೇಶ ಹಂಗರಗಿ, ನಗರಸಭೆ ವತಿಯಿಂದ ಚರಂಡಿಗಳ ಹೂಳೆತ್ತುವ ಕೆಲಸ ನಡೆಯುತ್ತಿದೆ. ಹಿಟಾಚಿ ನದಿಯ ಹೂಳೆತ್ತಲಾಗುವುದು. ಅದಕ್ಕಾಗಿ ಹೆಚ್ಚುವರಿ 40 ಕಾರ್ಮಿಕರನ್ನು ನೇಮಿಸಲು ಟೆಂಡರ್ ಕರೆಯಲಾಗಿದೆ ಎಂದರು.
ಮಾಜಿ ಸದಸ್ಯ ರಮೇಶ್ ಕಾಂಚನ್ ಮಾತನಾಡಿ, ವಾರಾಹಿ ಯೋಜನೆಗೆ ಸಂಬಂಧಿಸಿ ನಗರದಲ್ಲಿ ಅಳವಡಿಸಿರುವ ಪೈಪ್ಗಳು ಒಡೆದುಹೋಗಿ ನೀರು ಪೋಲಾಗುತ್ತಿದೆ. ನಗರಸಭೆಯ ಅಧಿಕಾರಿಗಳು ಫೋನ್ ಕರೆ ಸ್ವಿಕರಿಸುತ್ತಿಲ್ಲ ಎಂದು ಸಭೆಯ ಗಮನಕ್ಕೆ ತಂದರು. ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ವಿವಿಧೆಡೆ ವಾರಾಹಿ ಯೋಜನೆಯ ಪೈಪ್ಗಳು ಒಡೆದುಹೋಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಸಂಬಂಧಪಟ್ಟವರು ಸಮಸ್ಯೆ ಪರಿಹರಿಸಬೇಕು ಎಂದರು.
ಮಳೆಗಾಲ ಸಮೀಪಿಸುತ್ತಿರುವುದರಿಂದ ಪ್ರಾಕೃತಿಕ ವಿಕೋಪ ಸಂಭವಿಸಿದರೆ ತುರ್ತು ಸ್ಪಂದಿಸಲು ತಂಡವೊಂದನ್ನು ರಚಿಸಬೇಕು ಸಭೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಸದಸ್ಯರು ಆಗ್ರಹಿಸಿದರು.
ಫ್ರೀ ಲೆಫ್ಟ್ ಸಮಸ್ಯೆ ಪರಿಹರಿಸಿ’
ಕಲ್ಸಂಕ ಜಂಕ್ಷನ್ ನಲ್ಲಿ ಸಿಗ್ನಲ್ ಬೀಳುವಾಗ ಫ್ರೀ ಲೆಟ್ಸ್ ಜಾಗದಲ್ಲಿ ಬಸ್, ರಿಕ್ಷಾವನ್ನು ನಿಲ್ಲಿಸುವುದರಿಂದ ಗುಂಡಿಬೈಲ್ ಕಡೆಗೆ ಹೋಗುವವರಿಗೆ ಸಮಸ್ಯೆಯಾಗುತ್ತಿದೆ ಎಂದು ನಗರಸಭೆಯ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ ಹೇಳಿದರು. ಫ್ರೀಲೆಫ್ಟ್ ಸಮೀಪ ವಾಹನ ಪಾರ್ಕ್ ಮಾಡುವವರಿಗೆ ಪೊಲೀಸರು ದಂಡ ವಿಧಿಸಬೇಕು ಮತ್ತು ಅಲ್ಲಿ ಸಂಚಾರ ನಿಂತ್ರಿಸಲು ಪೊಲೀಸರನ್ನು ನೇಮಿಸಬೇಕು ಎಂದು ಆಗ್ರಹಿಸಿದರು.

