ಉಡುಪಿ: ‘ವಿಕಸಿತ ಭಾರತ–2047’ ಅಭಿಯಾನದಲ್ಲಿ ಯುವಜನರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ‘ವಿಕಸಿತ್ ಭಾರತ್ ಯಂಗ್ ಲೀಡರ್ಸ್ ಡೈಲಾಗ್ (VBYLD)–2027’ ಕಾರ್ಯಕ್ರಮವನ್ನು ಆಯೋಜಿಸಿದೆ.
ಇದರ ಭಾಗವಾಗಿ ‘ಮೈ ಭಾರತ್’ (MY Bharat) ಪೋರ್ಟಲ್ನಲ್ಲಿ ಜಿಲ್ಲಾ ಮಟ್ಟದ ಆನ್ಲೈನ್ ರಸಪ್ರಶ್ನೆ ಆರಂಭವಾಗಿದ್ದು, ಉಡುಪಿ ಜಿಲ್ಲೆಯಲ್ಲಿ ವಾಸಿಸುವ ಅಥವಾ ಅಧ್ಯಯನ ಮಾಡುತ್ತಿರುವ 15ರಿಂದ 29 ವರ್ಷದ ಯುವಜನರು ಉಚಿತವಾಗಿ ಭಾಗವಹಿಸಬಹುದು ಎಂದು ಮೈ ಭಾರತ್ ಕೇಂದ್ರದ ಉಪನಿರ್ದೇಶಕ ಉಲ್ಲಾಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೂರು ಹಂತದ ಆಯ್ಕೆ:
ಮೊದಲ ಹಂತದಲ್ಲಿ ಆನ್ಲೈನ್ ಬಹುಭಾಷಾ ರಸಪ್ರಶ್ನೆ ನಡೆಯಲಿದೆ. ಹೆಚ್ಚು ಅಂಕ ಗಳಿಸಿದವರು ಎರಡನೇ ಹಂತದಲ್ಲಿ ಪ್ರಮುಖ ವಿಷಯಗಳ ಕುರಿತು 300 ಪದಗಳ ಪ್ರಬಂಧ ಬರೆಯಬೇಕು. ಪ್ರತಿ ಜಿಲ್ಲೆಯಿಂದ ಆಯ್ಕೆಯಾಗುವ ಅಗ್ರ 50 ಪ್ರಬಂಧಕಾರರು ಮೂರನೇ ಹಂತದಲ್ಲಿ ತಜ್ಞರ ಸಮಿತಿ ಮುಂದೆ ವಿಚಾರ ಮಂಡಿಸಲಿದ್ದಾರೆ. ಉಡುಪಿಯಿಂದ ಇಬ್ಬರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಲಿದ್ದು, ಅಂತಿಮವಾಗಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಮಂತ್ರಿ ಸೇರಿದಂತೆ ಗಣ್ಯರ ಮುಂದೆ ವಿಚಾರ ಮಂಡಿಸುವ ಅವಕಾಶ ದೊರೆಯಲಿದೆ.
ವಿಕಸಿತ ಭಾರತ ಚಾಲೆಂಜ್, ನಾವೀನ್ಯತೆ, ವಿನ್ಯಾಸ, ಸಾಮಾಜಿಕ ಕಾಳಜಿ, ಯುವ ಉದ್ಯಮಶೀಲತೆ ಹಾಗೂ ಯುವ ಸಂಸತ್ತು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಯುವಕರಿಗೆ ತಮ್ಮ ಪ್ರತಿಭೆ ಮತ್ತು ಆಲೋಚನೆಗಳನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಲಾಗಿದೆ.
ಅರ್ಹ ಯುವಜನರು mybharat.gov.in ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಂಡು ‘VBYLD 2027 Quiz’ ಆಯ್ಕೆ ಮಾಡಿ ತಮ್ಮ ಆದ್ಯತೆಯ ಭಾಷೆಯಲ್ಲಿ ರಸಪ್ರಶ್ನೆ ಪೂರ್ಣಗೊಳಿಸಬಹುದು. ಶಿಕ್ಷಣ ಸಂಸ್ಥೆಗಳು, ಯುವಕ ಮಂಡಳಿಗಳು, ಕ್ರೀಡಾ ಸಂಘಗಳು ಹಾಗೂ ವಿವಿಧ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು ಎಂದು ಉಲ್ಲಾಸ್ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಶ್ಯಾಮಲಾ ಉಪಸ್ಥಿತರಿದ್ದರು.

