ಉಡುಪಿ: ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮುಸ್ಲಿಂ ಧರ್ಮದ ವಿರುದ್ಧ ಅವಹೇಳನಾಕಾರಿ ಮತ್ತು ಪ್ರಚೋದನಾಕಾರಿಯಾಗಿ ಕಾಮೆಂಟ್ ಮಾಡಿದ ಆರೋಪದಡಿ ಉಡುಪಿಯ ವೈದ್ಯ ಡಾ.ಕೀರ್ತನ್ ಉಪಾಧ್ಯ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.
ಲ್ಯಾಪ್ರೋಸ್ಕೋಪಿ ಶಸ್ತ್ರ ಚಿಕಿತ್ಸಾ ತಜ್ಞ ಡಾ. ಕೀರ್ತನ್ ಉಪಾಧ್ಯ ಲಾನ್ಲಿ ಸ್ಟ್ರೇಂಜರ್ ಎಂಬ ಹೆಸರಿನ ಎಕ್ಸ್ ಖಾತೆಯನ್ನು ಹೊಂದಿದ್ದು, ಜು.13ರಂದು ಎಕ್ಸ್ನಲ್ಲಿ ಅಭಿ ಆ್ಯಂಡ್ ನೀಯು ಖಾತೆಯಿಂದ ‘ಈ ಜಗತ್ತಿನಿಂದ ನೀವು ಏನಾದರೂ ಒಂದನ್ನು ಇಲ್ಲವಾಗಿಸಲು ಬಯಸುವುದಾದರೆ ಅದು ಯಾವುದು?’ ಎಂಬುದಾಗಿ ಪ್ರಶ್ನಿಸ ಲಾಗಿತ್ತು. ಅದಕ್ಕೆ ಡಾ.ಉಪಾಧ್ಯ ತಮ್ಮ ಲೋನ್ಲಿ ಸ್ಟ್ರೇಂಜರ್ ಖಾತೆಯಿಂದ ‘ಮುಸ್ಲಿಂ ಕಮ್ಯುನಿಟಿ’ ಎಂದು ಪ್ರಚೋದನಕಾರಿಯಾಗಿ ಉತ್ತರಿಸಿದ್ದರು. ಇದರ ಸ್ಕ್ರೀನ್ ಶಾಟ್ ಸಾಮಾಜಿಕ ತಾಣಗಳಲ್ಲಿ ವೈರಲಾಗಿ ದೊಡ್ಡ ವಿವಾದ ಸೃಷ್ಠಿಯಾಗಿದೆ.

