ಉಡುಪಿ: ಜಿಲ್ಲೆಯಲ್ಲಿ ದಲಿತ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಸಮಿತಿ ನಿಯೋಗವು ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರೊಂದಿಗೆ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮಾಲೋಚನೆ ನಡೆಸಿತು.

ಉಡುಪಿ ಜಿಲ್ಲೆಯಲ್ಲಿ ಇರುವ ಲಭ್ಯ ಡಿಸಿ ಮನ್ನಾ ಭೂಮಿಗಳನ್ನು ಗುರುತಿಸಿ, ಅರ್ಹ ಭೂ ರಹಿತ ಪರಿಶಿಷ್ಟರಿಗೆ ಮರು ಹಂಚಿಕೆ ಮಾಡುವ ಕಾರ್ಯಕ್ರಮವನ್ನು ಕೂಡಲೇ ಜಾರಿಗೊಳಿಸಬೇಕು. ನಿರುದ್ಯೋಗಿ ಪರಿಶಿಷ್ಟ ಯುವಕರಿಗೆ ಉದ್ಯೋಗ ಕಲ್ಪಿಸಲು ಉಡುಪಿ ಜಿಲ್ಲೆಯ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ವಾರ್ಷಿಕ ಕನಿಷ್ಟ 2 ಕೋಟಿ ಅನುದಾನ ಒದಗಿಸಬೇಕು ಎಂದು ನಿಯೋಗ ಆಗ್ರಹಿಸಿದೆ.

ಉಡುಪಿ ಜಿಲ್ಲೆಯಲ್ಲಿ ಪರಿವಾರ ನಾಯ್ಕ, ಮೊಗೇರ ಮತ್ತು ಭೋವಿ ಸಮುದಾಯಗಳು ಪರಿಶಿಷ್ಟರ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣಪತ್ರ ನೀಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು ಮತ್ತು ಇವರಿಗೆ ಜಾತಿ ಪ್ರಮಾಣ ಪತ್ರ ವಿತರಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.

ಉಡುಪಿ ಜಿಲ್ಲೆಯಲ್ಲಿ ಪರಿಶಿಷ್ಟೇತರರು ಅಮಾಯಕ ದಲಿತರ ಹೆಸರಿನಲ್ಲಿ ಗುತ್ತಿಗೆ ಪರವಾನಿಗೆಯನ್ನು ಮಾಡಿಕೊಂಡು ಕನಿಷ್ಟ ಮೊತ್ತಕ್ಕೆ ಟೆಂಡರ್ ಸಲ್ಲಿಸಿ, ಪರಿಶಿಷ್ಟರಿಗೆ ಸಿಗಬೇಕಾಗಿರುವ ಟೆಂಡರ್ ಕಾಮಗಾರಿಗಳನ್ನು ಪಡೆದು ಕೊಳ್ಳುತ್ತಿದ್ದಾರೆ. ಇಂತಹ ಪ್ರಕರಣಗಳ ಬಗ್ಗೆ ವಿಶೇಷ ತನಿಖೆ ನಡೆಸಿ, ಅಂತಹ ಪರಿಶಿಷ್ಟೇತರ ಗುತ್ತಿಗೆದಾರರ ಗುತ್ತಿಗೆ ಲೈಸನ್ಸ್ ರದ್ದುಗೊಳಿಸಬೇಕು ಎಂದು ನಿಯೋಗ ಒತ್ತಾಯಿಸಿದೆ.

ದಸಂಸ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ್ ಗಿಳಿಯಾರು ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ದಲಿತ ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಉಡುಪಿ ಜಿಲ್ಲೆಯ ಅಭಿವೃದ್ಧಿಯನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಅವರಿಗೆ ಉಡುಪಿ ಜಿಲ್ಲೆ ಬಗ್ಗೆ ಎಳ್ಳಷ್ಟು ಪ್ರೀತಿ ಇಲ್ಲ. ಅವರು ಬೆಳಗಾವಿ ರಾಜಕಾರಣದಲ್ಲಿ ಮುಳುಗಿದ್ದು, ಉಡುಪಿ ಜನರ ಪರವಾಗಿ ಕೆಲಸ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಲಿತರ ಸಮಸ್ಯೆ, ಕಾರ್ಮಿಕರ ಸಮಸ್ಯೆ, ಶೋಷಿತರ ಸಮಸ್ಯೆಯ ಬಗ್ಗೆ ಅವರ ಬಳಿ ಚರ್ಚೆ ನಡೆಸಲು ಮನವಿ ಮಾಡಿದ್ದೇವೆ. ಆದರೆ ಅವರು ಭರವಸೆ ಕೊಟ್ಟದ್ದು ಬಿಟ್ಟರೆ ಈವರೆಗೂ ಒಂದೇ ಒಂದು ಸಭೆ, ಚರ್ಚೆ ನಡೆಸಿಲ್ಲ. ಅವರಲ್ಲಿ ಕೇವಲ ವ್ಯಾಪರೀಕರಣ ಧೋರಣೆ ಇದೆ ಎಂದು ಟೀಕಿಸಿದರು. ಜಿಲ್ಲಾಡಳಿತವು ಡಿಸಿ ಮನ್ನಾ ಭೂಮಿ ಸಹಿತ ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದೆ. ಆ ಭರವಸೆ ಈಡೇರದಿದ್ದರೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ದೊಡ್ಡಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ದಸಂಸ ಮುಖಂಡರಾದ ಸುಂದರ ಮಾಸ್ತರ್ ಮಾತನಾಡಿ, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಅಕ್ರಮ-ಸಕ್ರಮ ಸಮಿತಿಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಸಮಿತಿಗಳು ಪರಿಶಿಷ್ಟರ ಅರ್ಜಿಗಳನ್ನು ಆಧ್ಯತೆಯ ಮೇರೆಗೆ ಪರಿಗಣಿಸುತ್ತಿಲ್ಲ. ಪರಿಶಿಷ್ಟರಿಗೆ ಮಂಜೂರು ಆಗಿರುವ ದರ್ಖಾಸ್ತು ಭೂಮಿಗಳು ಬಲಾಢ್ಯ ಸಮುದಾಯಗಳ ಸ್ವಾಧೀನತೆಯಲ್ಲಿದ್ದು, ಇನ್ನೂ ಕೆಲವು ಕರ್ನಾಟಕ ಗೇರು ಅಭಿವೃದ್ಧಿ ನಿಗಮವು ಅಕ್ರಮವಾಗಿ ಸ್ವಾಧೀನತೆ ಹೊಂದಿರುತ್ತದೆ. ಇನ್ನೂ ಕೆಲವು ಸಾಮಾಜಿಕ ಅರಣ್ಯದ ಹೆಸರಿನಲ್ಲಿ ಅರಣ್ಯ ಇಲಾಖೆಯವರು ಸ್ವಾಧೀನತೆ ಹೊಂದಿರುತ್ತಾರೆ. ಇಂತಹ ಭೂಮಿಗಳನ್ನು ಮಂಜೂರಾತಿದಾರರಿಗೆ ಒದಗಿಸಿಕೊಡಬೇಕು.

ಜಿಲ್ಲೆಯಲ್ಲಿ ಪರಿಬಾವಿತ ಅರಣ್ಯ ಪ್ರದೇಶವೆಂದು ದೋಷಪೂರಿತ ನಿರ್ಣಯಗಳಿಂದ ಸಮುದಾಯಕ್ಕೆ ಮಂಜೂರು ಆಗಿರುವ ಭೂಮಿಗಳು ಮತ್ತು ಮಂಜೂರಾತಿಗಾಗಿ ನಿಗದಿ ಅರ್ಜಿ ನಮೂನೆಯಲ್ಲಿ ಸಲ್ಲಿಸಿರುವ ಪರಿಶಿಷ್ಟರ ಅರ್ಜಿ ಗಳನ್ನು ಪರಿಗಣಿಸುತ್ತಿಲ್ಲ. ಈ ಬಗ್ಗೆ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯು ಜಂಟಿ ಸರ್ವೆ ನಡೆಸಬೇಕು ಎಂದು ಆಗ್ರಹಿಸಿದರು.

ನಿಯೋಗದಲ್ಲಿ ಮುಖಂಡರಾದ ಶಾಮರಾಜ್ ಬಿರ್ತಿ, ಶ್ಯಾಮಸುಂದರ್ ತೆಕ್ಕಟ್ಟೆ, ಸುರೇಶ್ ಹಕ್ಲಾಡಿ, ಅಣ್ಣಪ್ಪ ನಕ್ರೆ, ಭಾಸ್ಕರ ಮಾಸ್ತರ್, ಮಂಜುನಾಥ್ ನಾಗೂರು, ರಾಜೇಂದ್ರ ಕಾಪು, ರಾಘವ ಕುಕ್ಕುಜೆ, ಶಿವರಾಜ್ ಬೈಂದೂರು, ರಾಜು ಕೆ.ಸಿ., ಹರೀಶ್ಚಂದ್ರ ಕೆ.ಡಿ., ದೇವು ಹೆಬ್ರಿ, ಗೀತಾ ಸುರೇಶ್, ವಿನಯಾ ಮಾಸ್ತಿಕಟ್ಟೆ, ಕುಮಾರ್ ದಾಸ್ ಹಾಲಾಡಿ ಉಪಸ್ಥಿತರಿದ್ದರು.