ಉಡುಪಿ: ಮುದರಂಗಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜ ಅವರ ಶೂಟ್ಔಟ್ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಅದಾನಿ ಯುಪಿಸಿಎಲ್ನ ಕೋಟ್ಯಂತರ ರೂಪಾಯಿ ಮೊತ್ತದ ಗುತ್ತಿಗೆ ಕೈತಪ್ಪಿದ್ದಕ್ಕೆ ಆಕ್ರೋಶಗೊಂಡಿದ್ದ ಗುತ್ತಿಗೆದಾರ ಕಿಶೋರ್ ರಾಮ ಪೂಜಾರಿ ₹10 ಲಕ್ಷಕ್ಕೆ ಸುಪಾರಿ ನೀಡಿ ಹತ್ಯೆ ಮಾಡಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಉಡುಪಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ತನಿಖೆಯ ಬೆಳವಣಿಗೆಗಳ ಕುರಿತು ಮಾಹಿತಿ ನೀಡಿದ ಅವರು, ಉಚ್ಚಿಲ ನಿವಾಸಿ ಕಿಶೋರ್ ರಾಮ ಪೂಜಾರಿ ಈ ಹಿಂದೆ ಯುಪಿಸಿಎಲ್ನಲ್ಲಿ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ. ಸುಮಾರು ಆರು ತಿಂಗಳ ಹಿಂದೆ ಎರ್ಮಾಳಿನಲ್ಲಿ ಯುಪಿಸಿಎಲ್ ಕೈಗೆತ್ತಿಕೊಂಡಿದ್ದ ಪೈಪ್ಲೈನ್ ಮತ್ತು ಕಾಂಕ್ರೀಟ್ ರಸ್ತೆ ಕಾಮಗಾರಿಯ ಗುತ್ತಿಗೆಯನ್ನು ತನಗೆ ನೀಡುವಂತೆ ಕಿಶೋರ್ ಕೇಳಿಕೊಂಡಿದ್ದ. ಆದರೆ ಕಂಪೆನಿ ಗುತ್ತಿಗೆಯನ್ನು ಡೇವಿಡ್ ಡಿಸೋಜ ಅವರಿಗೆ ನೀಡಿತ್ತು. ಕೋಟ್ಯಂತರ ರೂಪಾಯಿ ಮೊತ್ತದ ಈ ಯೋಜನೆ ಕೈತಪ್ಪಿದ್ದರಿಂದ ಕಿಶೋರ್ ಹತ್ಯೆಗೆ ಸಂಚು ರೂಪಿಸಿದ್ದಾನೆ ಎಂದು ಹೇಳಿದರು.
ತನಿಖೆಯಿಂದ ಸಂಚು ಬಯಲು:
ಆ.7ರಂದು ನಡೆದ ಹತ್ಯೆಗೆ ಸಂಬಂಧಿಸಿ ಪೊಲೀಸರು ನೇರವಾಗಿ ಭಾಗಿಯಾಗಿದ್ದ ರಾಜು, ಅನ್ಮೋಲ್ ರಸ್ತೋಗಿ ಹಾಗೂ ಜಿಯಾಹುಲ್ ಶೇಖ್ ಅವರನ್ನು ಬಂಧಿಸಿದ್ದರು. ಅನ್ಮೋಲ್ ಮತ್ತು ಜಿಯಾಹುಲ್ ಅವರನ್ನು ವಿಚಾರಣೆಗೊಳಪಡಿಸಿದಾಗ ಗುತ್ತಿಗೆ ವಿಚಾರಕ್ಕೆ ಸಂಬಂಧಿಸಿದ ಹಣಕಾಸಿನ ವ್ಯವಹಾರ ಹಾಗೂ ಅವರಿಗೆ ಡೀಲ್ ನೀಡಿರುವ ಮಾಹಿತಿ ಲಭಿಸಿತು.
ಬಂಧಿತರ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ ಮೊಹಮ್ಮದ್ ಇರ್ಷಾದ್, ಚಿರಾಗ್ ಪೂಜಾರಿ ಮತ್ತು ಸದಾನಂದ ದೇವಾಡಿಗ ಅವರು ಹಣ ಜಮಾ ಮಾಡಿರುವುದು ಪತ್ತೆಯಾಯಿತು. ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೃತ್ಯಕ್ಕೆ ಹಣಕಾಸಿನ ವ್ಯವಸ್ಥೆ ಮಾಡಿರುವುದು ಹಾಗೂ ಸುಪಾರಿ ನೀಡಿರುವುದು ಕಿಶೋರ್ ಪೂಜಾರಿ ಎಂಬುದು ಬೆಳಕಿಗೆ ಬಂದಿದೆ ಎಂದು ಎಸ್ಪಿ ತಿಳಿಸಿದರು.
ತನಿಖೆ ನಡೆಸುತ್ತಿದ್ದ ಪೊಲೀಸ್ ತಂಡ ಬಿಹಾರ ಮೂಲದ ಸೂರಜ್ ಕುಮಾರ್ ಎಂಬಾತನನ್ನು ಉತ್ತರಾಖಂಡದಲ್ಲಿ ಬಂಧಿಸಿತು. ಆತನ ವಿಚಾರಣೆಯಿಂದ ಹತ್ಯೆಗೆ ಶೂಟರ್ಗಳನ್ನು ವ್ಯವಸ್ಥೆ ಮಾಡಿದ್ದ ಅನೂಜ್ ಬಗ್ಗೆ ಮಾಹಿತಿ ದೊರೆಯಿತು. ವಿವಿಧೆಡೆ ಸಂಚರಿಸುತ್ತಿದ್ದ ಅನೂಜ್ನನ್ನು ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಪೊಲೀಸರು ಬಂಧಿಸಿದರು.
₹10 ಲಕ್ಷಕ್ಕೆ ಸುಪಾರಿ:
ಡೇವಿಡ್ ಡಿಸೋಜ ಅವರನ್ನು ಹತ್ಯೆ ಮಾಡಲು ಕಿಶೋರ್ ಪೂಜಾರಿ ₹10 ಲಕ್ಷದ ಸುಪಾರಿ ನೀಡಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಮೊತ್ತವನ್ನು ಮೂವರು ಶೂಟರ್ಗಳ ಖಾತೆಗಳಿಗೆ ಪಾವತಿಸಲಾಗಿತ್ತು. ಅನೂಜ್ ಮೊದಲು ಇಬ್ಬರು ಶೂಟರ್ಗಳನ್ನು ಸಂಪರ್ಕಿಸಿದ್ದ. ಆದರೆ ಹಣದ ವಿಚಾರದಲ್ಲಿ ಒಪ್ಪಂದವಾಗದೆ ಅವರು ಹಿಂದೆ ಸರಿದಿದ್ದರು. ಇದೀಗ ಆ ಇಬ್ಬರು ಶೂಟರ್ಗಳು ಬೇರೆ ಪ್ರಕರಣದಲ್ಲಿ ಗುಜರಾತ್ ಪೊಲೀಸರ ವಶದಲ್ಲಿರುವ ಮಾಹಿತಿ ಲಭಿಸಿದ್ದು, ಅದನ್ನು ಖಚಿತಪಡಿಸಿಕೊಳ್ಳಬೇಕಿದೆ ಎಂದು ಎಸ್ಪಿ ಹೇಳಿದರು. ಆ ಇಬ್ಬರು ಶೂಟರ್ಗಳು ಡೇವಿಡ್ ಹತ್ಯೆಯಲ್ಲಿ ಭಾಗವಹಿಸದಿದ್ದರೂ ಸಂಚಿನ ಭಾಗವಾಗಿದ್ದರು ಎನ್ನುವುದು ತನಿಖೆಯಿಂದ ತಿಳಿದುಬಂದಿದೆ ಎಂದರು.
ಪಂಜಾಬ್, ಕೇರಳ ಕಂಪೆನಿಗಳಿಗೂ ನಂಟಿಲ್ಲ
ಆರಂಭಿಕ ತನಿಖೆಯಲ್ಲಿ ಪಂಜಾಬ್ ಮೂಲದ ಗುತ್ತಿಗೆ ಕಂಪೆನಿ ಹಾಗೂ ಕೇರಳದ ಕಂಪೆನಿಯೊಂದು ಪ್ರಕರಣದ ಹಿಂದೆ ಇರುವ ಶಂಕೆ ವ್ಯಕ್ತವಾಗಿತ್ತು. ಆದರೆ ತನಿಖೆಯಲ್ಲಿ ಎರಡೂ ಕಂಪೆನಿಗಳು ಹತ್ಯೆಗೆ ಯಾವುದೇ ಹಣಕಾಸಿನ ನೆರವು ನೀಡಿರುವುದು ಕಂಡುಬಂದಿಲ್ಲ ಎಂದು ಎಸ್ಪಿ ಸ್ಪಷ್ಟಪಡಿಸಿದರು.
ಹೇಮಂತ್ ಪೂಜಾರಿ ಹೆಸರಿನಲ್ಲಿ ಕರೆ:
ಎರ್ಮಾಳಿನ ಯುಪಿಸಿಎಲ್ ಯೋಜನೆಯನ್ನು ಕಿಶೋರ್ ಪೂಜಾರಿಗೆ ನೀಡುವಂತೆ ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಿನಲ್ಲಿ ಯುಪಿಸಿಎಲ್ ಅಧಿಕಾರಿಗಳು ಹಾಗೂ ಡೇವಿಡ್ ಡಿಸೋಜ ಅವರಿಗೆ ಇಂಟರ್ನೆಟ್ ಮೂಲಕ ಕರೆಗಳು ಬಂದಿದ್ದವು. ಆದರೆ ಅವರು ಇದಕ್ಕೆ ಒಪ್ಪಿರಲಿಲ್ಲ.
ಅದೇ ವ್ಯಕ್ತಿ ಇರ್ಷಾದ್, ಚಿರಾಗ್ ಹಾಗೂ ಸದಾನಂದ ಅವರಿಗೂ ಕರೆ ಮಾಡಿ ಮಾತನಾಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಶೂಟರ್ಗಳು ಹಾಗೂ ಅವರೊಂದಿಗೆ ಸಮನ್ವಯ ಸಾಧಿಸಿದ್ದ ಅನೂಜ್ ಜತೆಗೂ ಹೇಮಂತ್ ಪೂಜಾರಿ ಸಂಪರ್ಕದಲ್ಲಿದ್ದ ಎನ್ನುವುದು ತನಿಖೆಯಿಂದ ಗೊತ್ತಾಗಿದೆ. ಸುಮಾರು ಆರು ತಿಂಗಳ ಹಿಂದೆಯೇ ಡೇವಿಡ್ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ಎಸ್ಪಿ ಹೇಳಿದರು.
ಹೇಮಂತ್ ಪಾತ್ರದ ಬಗ್ಗೆ ತನಿಖೆ:
‘ನನ್ನ ಅಣ್ಣ ಹೇಮಂತ್ ಪೂಜಾರಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ಕಿಶೋರ್ ಪೂಜಾರಿ ಹೇಳಿದ್ದಾನೆ. ಆದರೆ ಅದೇ ರಾತ್ರಿ ನಾವಿಬ್ಬರೂ ಹಲವು ವರ್ಷಗಳಿಂದ ಮಾತನಾಡುತ್ತಿಲ್ಲ ಎಂದೂ ಆತ ತಿಳಿಸಿದ್ದಾನೆ. ಹೀಗಾಗಿ ಪ್ರಕರಣದಲ್ಲಿ ಹೇಮಂತ್ ಪೂಜಾರಿ ಭಾಗಿಯಾಗಿದ್ದಾನೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ’ ಎಂದು ಹರಿರಾಮ್ ಶಂಕರ್ ಹೇಳಿದರು.
ಹೇಮಂತ್ ಪೂಜಾರಿ ಕಳೆದ 10 ವರ್ಷಗಳಿಂದ ಯಾವುದೇ ಬೆದರಿಕೆ ಕರೆ ಮಾಡಿರುವುದು ವರದಿಯಾಗಿಲ್ಲ. ಆತ ಯಾವುದೇ ಪ್ರಕರಣದಲ್ಲಿ ಈವರೆಗೆ ಬಂಧಿತನಾಗಿಲ್ಲ. ಕಳೆದ 25 ವರ್ಷಗಳಿಂದ ತಲೆಮರೆಸಿಕೊಂಡಿದ್ದಾನೆ. ಕಿಶೋರ್ ಪೂಜಾರಿ ವಿರುದ್ಧ ಎರಡು ಕೊಲೆ ಪ್ರಕರಣಗಳಿದ್ದು, ಹೇಮಂತ್ ಪೂಜಾರಿ ಜತೆ ಸೇರಿ ಕೆಲವು ಅಪರಾಧಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಎಸ್ಪಿ ಮಾಹಿತಿ ನೀಡಿದರು.

