ಉಡುಪಿ: ಸಂಸತ್ತಿನಲ್ಲಿ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲೆ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಹಮ್ಮಿಕೊಳ್ಳಲಾದ ಪ್ರತಿಭಟನೆಯಲ್ಲಿ ಮನುಸ್ಮತಿ ಹಾಗೂ ಅಮಿತ್ ಶಾ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಮಾತನಾಡಿ, ದೇಶವನ್ನು ಆಳ್ವಿಕೆ ಮಾಡುತ್ತಿರುವ ಮನುವಾದಿಗಳಿಗೆ ಬಹುತ್ವ ಒಳಗೊಂಡ ಅಂಬೇಡ್ಕರ್ ನೀಡಿದ ಸಂವಿಧಾನ ಬಿಸಿತುಪ್ಪವಾಗಿದೆ.
ಈ ದೇಶದಲ್ಲಿ ದಲಿತರ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ, ಅತ್ಯಾಚಾರಗಳ ಬಗ್ಗೆ ಬಾಯಿ ಬಿಡದ ಅಮಿತ್ ಶಾ, ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಮಾತನಾಡುತ್ತಾರೆ. ಮೋದಿ ಪರಿವಾರಕ್ಕೆ ಸಂವಿಧಾನವೇ ದೊಡ್ಡ ತೊಡಕು ಆಗಿದೆ. ಅದಕ್ಕಾಗಿ ಅವರು ಸಂವಿಧಾನ ಬದಲಾವಣೆಗಾಗಿ ಕುತಂತ್ರಗಳನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ್ ಗಿಳಿಯಾರು ಮಾತನಾಡಿ, ಗುಜರಾತಿನಿಂದ ಗಡಿಪಾರು ಆಗಿದ್ದ ಕ್ರಿಮಿನಲ್ ಅಮಿತ್ ಶಾ ಇಂದು ದೇಶದ ಗೃಹ ಸಚಿವರಾಗಿ ಮೆರೆಯುತ್ತಿರುವುದು ದುರಂತ. ಶೋಷಿತ ಸಮುದಾಯಗಳನ್ನು ತುಳಿಯುವ ಆರ್ಎಸ್ಎಸ್ ಹಾಗೂ ಬಿಜೆಪಿಯ ಗುಪ್ತ ಅಜೆಂಡಾಗಳನ್ನು ಮುನ್ನಲೆಗೆ ತರುವ ಕಾರ್ಯವನ್ನು ಅಮಿತ್ ಶಾ ಮೂಲಕ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಆರ್ ಎಸ್ಎಸ್ ಮತ್ತು ಬಿಜೆಪಿಗೆ ಅಂಬೇಡ್ಕರ್ ಅವರನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕುತಂತ್ರ ನೀತಿಯಿಂದ ಇವರು ತಮ್ಮ ಅಜೆಂಡಾವನ್ನು ನಿಧಾನವಾಗಿ ಅನುಷ್ಠಾನಕ್ಕೆ ತರುವ ಕಾರ್ಯ ಮಾಡುತ್ತಿದ್ದಾರೆ. ಆದರೆ ಇದಕ್ಕೆಲ್ಲ ನಾವು ಅವಕಾಶ ನೀಡುವುದಿಲ್ಲ.
ಅಮಿತ್ ಶಾ ರಾಜಕೀಯ ಬಿಟ್ಟು ಮನೆಗೆ ಹೋಗುವವರೆಗೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಹಿರಿಯ ಚಿಂತಕ ಪ್ರೊ.ಫಣಿರಾಜ್, ದಸಂಸ ಸಂಘಟನಾ ಸಂಚಾಲಕ ಶ್ಯಾಮ್ರಾಜ್ ಬಿರ್ತಿ, ಮಂಜುನಾಥ್ ಬಾಳ್ಕುದ್ರು, ಶಿವಾನಂದ ಮೂಡಬೆಟ್ಟು, ಸಂಜೀವ ಬಳ್ಕೂರು ಮೊದಲಾದವರು ಉಪಸ್ಥಿತರಿದ್ದರು.

