ಉಡುಪಿ: ನೃತ್ಯ, ಸಂಗೀತ ಹಾಗೂ ಸಾಂಸ್ಕೃತಿಕ ಕಲಾಪ್ರಕಾರಗಳ ವೈಭವದ ಅನಾವರಣಕ್ಕೆ ಸಾಕ್ಷಿಯಾದ ನೃತ್ಯನಿಕೇತನ ಕೊಡವೂರು ಸಂಸ್ಥೆಯ ಎರಡು ದಿನಗಳ ‘ನೃತ್ಯಜಾತ್ರೆ’ಗೆ ಶನಿವಾರ ಎಂಜಿಎಂ ಕಾಲೇಜಿನ ಕ್ಯಾಂಪಸ್ನಲ್ಲಿ ಅದ್ಧೂರಿ ಚಾಲನೆ ದೊರೆಯಿತು.
ಕಲಾ ಉತ್ಸವದ ಅಂಗವಾಗಿ ನಟರಾಜನ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು. ಕಲಶ ಹೊತ್ತ ನೃತ್ಯಾಂಗನೆಯರು, ತಟ್ಟಿರಾಯ, ಗೊಂಬೆ ಮುಖವಾಡಗಳು, ವಾದ್ಯಮೇಳ, ಚೆಂಡೆ ವಾದನ, ಬಿರುದಾವಳಿಗಳು ಹಾಗೂ ಹುಲಿವೇಷ ಕುಣಿತ ಮೆರವಣಿಗೆಯ ಮೆರುಗು ಹೆಚ್ಚಿಸಿದವು. ಕಲಾವಿದರು ಮತ್ತು ಅತಿಥಿಗಳನ್ನು ಸಾಂಪ್ರದಾಯಿಕ ವೈಭವದೊಂದಿಗೆ ವೇದಿಕೆಗೆ ಕರೆತರಲಾಯಿತು. ಬಳಿಕ ನಟರಾಜನ ಮೂರ್ತಿಯನ್ನು ವೇದಿಕೆಯಲ್ಲಿರಿಸಿ ಕಲಾ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಎರಡು ದಿನಗಳ ನೃತ್ಯಜಾತ್ರೆಯಲ್ಲಿ ನೃತ್ಯನಿಕೇತನ ಕೊಡವೂರು ಸಂಸ್ಥೆಯ 375ಕ್ಕೂ ಅಧಿಕ ವಿದ್ಯಾರ್ಥಿಗಳು ವಿವಿಧ ನೃತ್ಯ ಪ್ರಕಾರಗಳನ್ನು ಪ್ರಸ್ತುತಪಡಿಸಲಿದ್ದಾರೆ. ನೃತ್ಯ ಪ್ರದರ್ಶನಗಳ ಜತೆಗೆ ಸಂಗೀತ ಕಾರ್ಯಕ್ರಮಗಳು, ಕಲಾ ಪ್ರಾತ್ಯಕ್ಷಿಕೆಗಳು, ಕಲಾಪ್ರದರ್ಶನ ಹಾಗೂ ವಿವಿಧ ಮಳಿಗೆಗಳು ಉತ್ಸವದ ಪ್ರಮುಖ ಆಕರ್ಷಣೆಗಳಾಗಿವೆ.
ಸುರಭಿ ಸುಧೀರ್ ಅವರ ವಾದ್ಯಸಂಗೀತ, ವಿದುಷಿ ಪ್ರೀತಿಕಲಾ ದೀಪಕ್ ಪುತ್ತೂರು ಅವರ ನೃತ್ಯಸಂಗೀತ, ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯಾಯ ಅವರ ಭಕ್ತಿ ಸಂಗೀತ, ಗಣೇಶ್ ಹೆಬ್ರಿ ಅವರ ಯಕ್ಷಸಂಗೀತ, ಮೈಸೂರಿನ ನಾವು ಬ್ಯಾಂಡ್ ತಂಡದ ರಂಗಸಂಗೀತ, ಕಲಾವತಿ ದಯಾನಂದ್ ಅವರ ಜಾನಪದ ಸಂಗೀತ ಹಾಗೂ ಅನುಷ್ ಶೆಟ್ಟಿ ಮೈಸೂರು ಬಳಗದ ‘ರಿದಂ ಅಡ್ಡ’ ಸಮಕಾಲೀನ ಸಂಗೀತ ಕಾರ್ಯಕ್ರಮಗಳು ಪ್ರೇಕ್ಷಕರಿಗೆ ರಸದೌತಣ ನೀಡಲಿವೆ.
ನೃತ್ಯಕ್ಕೆ ಅಗತ್ಯವಾದ ಆಭರಣಗಳು, ವಸ್ತ್ರಗಳು, ಗೆಜ್ಜೆ, ಗೆಜ್ಜೆ ಚೀಲ, ಖಾದಿ ಬಟ್ಟೆಗಳು, ಪುಸ್ತಕಗಳು ಹಾಗೂ ಗೃಹೋಪಯೋಗಿ ಉತ್ಪನ್ನಗಳ ಮಳಿಗೆಗಳನ್ನು ತೆರೆಯಲಾಗಿದೆ. ಬಟ್ಟೆ ತಯಾರಿಕೆ, ಮಣ್ಣಿನ ಉತ್ಪನ್ನಗಳು, ಕಾವಿ ಕಲೆ ಮತ್ತು ಚುಕ್ಕಿ ಕಲೆಯ ಪ್ರಾತ್ಯಕ್ಷಿಕೆಗಳೂ ನಡೆಯಲಿವೆ. ಕಲಾ ಪ್ರದರ್ಶನ, ಸೆಲ್ಫಿ ಕಾರ್ನರ್ ಹಾಗೂ ವಿವಿಧ ತಿಂಡಿ-ತಿನಿಸುಗಳ ಮಳಿಗೆಗಳು ಜಾತ್ರೆಗೆ ಮತ್ತಷ್ಟು ಮೆರುಗು ನೀಡಿವೆ.
ಹಿರಿಯ ಸಂಗೀತ ವಿಮರ್ಶಕ ಹಾಗೂ ರಂಜನಿ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷ ಪ್ರೊ. ಅರವಿಂದ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಡುಪಿ ಜಿಲ್ಲಾ ಸಹಾಯಕ ನಿರ್ದೇಶಕಿ ಪೂರ್ಣಿಮಾ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ್ ಶೆಣೈ ಅತಿಥಿಗಳಾಗಿ ಭಾಗವಹಿಸಿದ್ದರು. ನೃತ್ಯನಿಕೇತನ ಕೊಡವೂರು ಸಂಸ್ಥೆಯ ನಿರ್ದೇಶಕ ಕೆ. ಸುಧೀರ್ ರಾವ್, ನಿರ್ದೇಶಕಿ ವಿದುಷಿ ಮಾನಸಿ ಸುಧೀರ್, ಮುರಳೀಧರ ಉಪಾಧ್ಯಾಯ ಮೊದಲಾದವರು ಉಪಸ್ಥಿತರಿದ್ದರು.

