ಉಡುಪಿ: ದೀಪಾವಳಿ ಹಬ್ಬ ಅಂದ್ರೆ ಬೆಳಕಿನ ಹಬ್ಬ, ಮನೆಮನೆಯಲ್ಲೂ ದೀಪಗಳ ಸಂಭ್ರಮ. ಅದರಲ್ಲೂ ದೀಪಾವಳಿಯ ಮೆರುಗನ್ನು ಹೆಚ್ಚಿಸುವುದು ಬಣ್ಣಬಣ್ಣದ ಗೂಡು ದೀಪಗಳು. ಮಾರುಕಟ್ಟೆಯಲ್ಲಿ ತರಹೇವಾರಿ ವಿನ್ಯಾಸದ ಗೂಡು ದೀಪಗಳಿಗೆ ಭರ್ಜರಿ ಬೇಡಿಕೆ ಇದೆ. ಆದರೆ ಉಡುಪಿಯ ಚಿಟ್ಪಾಡಿಯಲ್ಲಿ ಮಕ್ಕಳ ತಂಡವೇ ತಮ್ಮ ಕೈಚಳಕದಲ್ಲಿ ಸುಂದರವಾದ ಗೂಡು ದೀಪಗಳನ್ನು ಸಿದ್ಧಪಡಿಸುತ್ತಿದೆ. ಮಮತಾ ಅವರ ಮಾರ್ಗದರ್ಶನದಲ್ಲಿ ಮಕ್ಕಳು ತಯಾರಿಸುತ್ತಿರುವ ಈ ಗೂಡು ದೀಪಗಳು ಕೇವಲ ಹಬ್ಬದ ಆಕರ್ಷಣೆಯಲ್ಲ, ಮಕ್ಕಳ ವಿದ್ಯಾಭ್ಯಾಸಕ್ಕೂ ಆದಾಯದ ಮೂಲವಾಗಿವೆ.

ಇದು ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡುವ ಬಣ್ಣಬಣ್ಣದ ಗೂಡು ದೀಪಗಳ ಲೋಕ. ದೀಪಾವಳಿ ಹಬ್ಬ ಹತ್ತಿರವಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಗೂಡು ದೀಪಗಳ ಖರೀದಿ ಜೋರಾಗಿದೆ. ವಿವಿಧ ವಿನ್ಯಾಸ, ಆಕರ್ಷಕ ಬಣ್ಣಗಳ ಗೂಡು ದೀಪಗಳಿಗೆ ಜನರಿಂದ ಉತ್ತಮ ಬೇಡಿಕೆ ವ್ಯಕ್ತವಾಗುತ್ತಿದೆ.ಇನ್ನು ಉಡುಪಿಯ ಚಿಟ್ಪಾಡಿಯಲ್ಲಿ ಮಕ್ಕಳ ಕೈಯಲ್ಲೇ ಅರಳುತ್ತಿವೆ ಸುಂದರ ಗೂಡು ದೀಪಗಳು.

ಮಮತಾ ಅವರ ಮಾರ್ಗದರ್ಶನದಲ್ಲಿ ಹಲವು ಮಕ್ಕಳು ಆಸಕ್ತಿಯಿಂದ ಸಾಂಪ್ರದಾಯಿಕ ಹಾಗೂ ಆಧುನಿಕ ವಿನ್ಯಾಸದ ಗೂಡು ದೀಪಗಳನ್ನು ತಯಾರಿಸುತ್ತಿದ್ದಾರೆ. ಕೈಯಲ್ಲೇ ಕತ್ತರಿಸಿ, ಜೋಡಿಸಿ, ಬಣ್ಣಬಣ್ಣದ ಕಾಗದಗಳಿಂದ ಅಲಂಕರಿಸಿ ಸಿದ್ಧಪಡಿಸುವ ಈ ಗೂಡು ದೀಪಗಳು ನೋಡುಗರ ಗಮನ ಸೆಳೆಯುತ್ತಿವೆ.ಪ್ರತಿ ವರ್ಷದಂತೆ ಈ ಬಾರಿಯೂ ಹೊಸ ಹೊಸ ವಿನ್ಯಾಸದ ಪರಿಸರ ಸ್ನೇಹಿ ಗೂಡು ದೀಪಗಳನ್ನು ಸಿದ್ಧಪಡಿಸಲಾಗಿದೆ.350 ರೂಪಾಯಿಯಿಂದ 700 ರೂಪಾಯಿವರೆಗೆ ವಿವಿಧ ವಿನ್ಯಾಸದ ಗೂಡು ದೀಪಗಳು ಮಾರಾಟಕ್ಕೆ ಲಭ್ಯವಿವೆ.

ಮಕ್ಕಳು ತಯಾರಿಸಿರುವ ಸಾಂಪ್ರದಾಯಿಕ ಗೂಡು ದೀಪಗಳಿಗೆ ಗ್ರಾಹಕರಿಂದ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ.ಇಲ್ಲಿ ಗೂಡು ದೀಪ ತಯಾರಿಕೆ ಮಕ್ಕಳಿಗೆ ಕೇವಲ ಹವ್ಯಾಸವಲ್ಲ..ಸೃಜನಶೀಲತೆಯ ಜೊತೆಗೆ ಸ್ವಾವಲಂಬನೆಯ ಪಾಠವೂ ಹೌದು.ತಮ್ಮ ಬಿಡುವಿನ ಸಮಯವನ್ನು ಸದುಪಯೋಗಪಡಿಸಿಕೊಂಡು ಗೂಡು ದೀಪ ತಯಾರಿಸುವ ಮಕ್ಕಳು, ಅದರಿಂದ ಬರುವ ಆದಾಯವನ್ನು ತಮ್ಮ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳುತ್ತಿದ್ದಾರೆ.ಪುಸ್ತಕ ಹಿಡಿಯುವ ಕೈಗಳು ಇಂದು ಕಲಾತ್ಮಕ ಗೂಡು ದೀಪಗಳನ್ನು ರೂಪಿಸುತ್ತಿವೆ. ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡುವ ಜೊತೆಗೆ ದೀಪಾವಳಿ ಹಬ್ಬದ ಸಂಭ್ರಮಕ್ಕೂ ಬೆಳಕು ನೀಡುತ್ತಿವೆ.

ಒಟ್ಟಿನಲ್ಲಿ ದೀಪಾವಳಿ ಹಬ್ಬದ ಬೆಳಕಿನ ಸಂಭ್ರಮದ ನಡುವೆ ಮಕ್ಕಳ ಪರಿಶ್ರಮ, ಪ್ರತಿಭೆ ಹಾಗೂ ಸ್ವಾವಲಂಬನೆಯ ಕನಸುಗಳು ಗೂಡು ದೀಪಗಳ ರೂಪದಲ್ಲಿ ಬೆಳಗುತ್ತಿವೆ.