ಉಡುಪಿ: ಸರಕಾರಿ ಬಸ್ ಪ್ರಯಾಣ ದರವನ್ನು ಶೇ. 15 ರಷ್ಟು ಏರಿಕೆ ಮಾಡಿರುವ ಸರಕಾರದ ಕ್ರಮವನ್ನು ಖಂಡಿಸಿ ಸಿಪಿಎಂ ಪಕ್ಷದ ನೇತೃತ್ವದಲ್ಲಿ ಬೈಂದೂರು ತಾಲೂಕಿನ ವಂಡ್ಸೆಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಕೇಂದ್ರ ಸರ್ಕಾರದ ಬೆಲೆಯೇರಿಕೆ ನೀತಿಯಿಂದಾಗಿ ಜನರು ಈಗಾಗಲೇ ಜೀವನ ನಡೆಸಲು ಕಷ್ಟಪಡುವಂತಾಗಿದೆ. ಇದರ ಮಧ್ಯೆಯೇ ರಾಜ್ಯ ಸರ್ಕಾರ ಬಡವರ ಜೀವನಾಡಿಯಾದ ಸರ್ಕಾರಿ ಬಸ್ ಗಳ ಪ್ರಯಾಣ ದರ ಏರಿಕೆ ಮಾಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡೀಸೆಲ್ ದರ ಇಳಿಕೆಯಾದರೂ ಖಾಸಗಿ ಬಸ್ ಗಳ ಪ್ರಯಾಣ ದರ ಇಳಿಕೆ ಮಾಡಿಲ್ಲ. ಅಲ್ಲದೆ, ಖಾಸಗಿ ಬಸ್ ಗಳು ಜಿಲ್ಲೆಗಳಲ್ಲಿ ಹಾಗೂ ರಾಜ್ಯದಲ್ಲಿ ದುಬಾರಿ ಪ್ರಯಾಣ ದರ ವಸೂಲಿ ಮಾಡುತ್ತಿವೆ. ಹೀಗಾಗಿ ಮತ್ತೆ ದರ ಹೆಚ್ಚಳ ಮಾಡಲು ಅವಕಾಶ ನೀಡಬಾರದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಶಂಕರ, ಭಾಸ್ಕರ್ ಶಾರ್ಕೆ, ಪ್ರಭಾಕರ ಗಾಣಿಗ, ನೇತ್ರಾವತಿ, ಗುಲಾಬಿ, ಗಿರಿಜ, ಮೂಕಾಂಬಿಕಾ, ಕೇಶವ ಇದ್ದರು.

