ಉಡುಪಿ: ಕಾರ್ಕಳ ತಾಲೂಕು ಜನಸ್ಪಂದನ ಸಭೆಯಲ್ಲಿ ಪರಶುರಾಮ ಥೀಂ ಪಾರ್ಕ್ ವಿಚಾರ ಮತ್ತೆ ಭುಗಿಲೆದ್ದಿದೆ. ಥೀಂ ಪಾರ್ಕ್ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ನಿಟ್ಟೆ ಗ್ರಾಮದ ವಿವೇಕ್ ಡಿ. ಶೆಟ್ಟಿ ದೂರು ನೀಡುತ್ತಿದಂತೆ ಶಾಸಕ ಸುನಿಲ್ ಕುಮಾರ್ ಆಕ್ರೋಶಗೊಂಡರು.

ಅಹವಾಲು ನೀಡುತ್ತಿದ್ದ ದೃಶ್ಯವನ್ನು ಪುರಸಭಾ ಸದಸ್ಯ ಶುಭದ ರಾವ್ ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದರು. ವೀಡಿಯೋ ಚಿತ್ರೀಕರಣಕ್ಕೆ ಆಕ್ಷೇಪ ಎತ್ತಿದ ಶಾಸಕ ಸುನಿಲ್ ಕುಮಾರ್, ಶುಭದ್ ರಾವ್ ಅವರ ಮೊಬೈಲ್ ಸೀಝ್ ಮಾಡುವಂತೆ ಪೊಲೀಸರಿಗೆ ಸೂಚಿಸಿದರು.

ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ ವಿಡಿಯೋ ಮಾಡದಂತೆ ಶುಭದ್ ರಾವ್ ಅವರ ಮೊಬೈಲ್ ಕಸಿಯಲು ಮುಂದಾದರು. ಈ ವೇಳೆ ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ನಾವು ಜನಸ್ಪಂದನ ಸಭೆಗೆ ಸಮಸ್ಯೆ ಹೇಳಿಕೊಳ್ಳಲು ಬಂದಿರುವುದು, ಮೊಬೈಲ್ ಕಸಿಯಲು ನಿಮಗೆ ಅಧಿಕಾರ ಇಲ್ಲ ಎಂದಾಗ ಇಡೀ ಸಭೆಯೇ ಗೊಂದಲದ ಗೂಡಾಯಿತು.

ದೂರಿಗೆ ಪ್ರತಿಕ್ರಿಯಿಸಿದ ಶಾಸಕರು, ಈ ಕುರಿತು ಈಗಾಗಲೇ ಸಿಓಡಿ ತನಿಖೆ ನಡೆಯುತ್ತಿದೆ ಎಂದರು. ಅದಕ್ಕೆ ದೂರುದಾರ, ಅವ್ಯವಹಾರಕ್ಕೆ ನೀವೇ ಕಾರಣ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸುನಿಲ್ ಕುಮಾರ್, ಹಾಗಾದ್ರೆ ನೀವು ಕೋರ್ಟ್ ಗೆ ಹೋಗಿ ಎಂದು ಟಾಂಗ್ ನೀಡಿದರು. ಪಟ್ಟು ಬಿಡದೆ ಶಾಸಕರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ವಾಗ್ವಾದ ನಡೆಸಿದರು.

ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಬೇಕಿದ್ದ ಅಧಿಕಾರಿಗಳು ಸಾರ್ವಜನಿಕರಿಗೆ ಮೈಕ್ ನೀಡದೇ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶ ಕೊಡದೇ ಅಹವಾಲುಗಳನ್ನು ಪಡೆದು ಕಂದಾಯ ಅದಾಲತ್ ರೀತಿಯಲ್ಲಿ ವೇದಿಕೆಯಲ್ಲೇ ಮಾತುಕತೆ ನಡೆಸಿದ್ದಾರೆ. ಜನಸ್ಪಂದನ ಸಭೆಯಲ್ಲಿ ಜನರ ಸಮಸ್ಯೆಗಳ ಸ್ವರೂಪ ಹಾಗೂ ದೂರಿನ ಕುರಿತು ಕೈಗೊಂಡ ಕ್ರಮದ ಕುರಿತು ಸಭೆಯಲ್ಲಿ ಮಾಹಿತಿ ನೀಡದೇ ಇದು ಕೇವಲ ಕಾಟಾಚಾರಕ್ಕೆ ನಡೆಸಿದ ಜನ ಸ್ಪಂದನ ಸಭೆಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.