ಉಡುಪಿ: ಹಾಡು ಹಗಲೇ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಕಾಂಗ್ರೆಸ್ ಮುಖಂಡ ಪ್ರಿನ್ಸ್ ಡೇವಿಡ್ ಡಿಸೋಜಾ ಹಂತಕರು ಪತ್ತೆಯಾಗಿದ್ದಾರೆ. ಕೊಲೆ ನಡೆದ ಎಂಟು ಗಂಟೆಗಳ ಒಳಗಾಗಿ ಉಡುಪಿ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಉಡುಪಿಯ ಕಾನೂನು ಸುವ್ಯವಸ್ಥೆಗೆ ತಲೆ ನೋವಾಗಿದ್ದ, ಈ ಪ್ರಕರಣದಲ್ಲಿ ಶೂಟರ್ ರಾಜು ಎಂಬಾತನ ಕಾಲಿಗೆ ಪೊಲೀಸರು ಗುಂಡೇಟು ಹೊಡೆದಿದ್ದಾರೆ.
ವಾಯ್ಸ್- ಪ್ರಿನ್ಸ್ ಡೇವಿಡ್ ಡಿಸೋಜ, ಹೆಸರಿಗೆ ತಕ್ಕಂತೆ ರಾಜಕುಮಾರನಂತೆ ಉಡುಪಿ ಜಿಲ್ಲೆಯ ಕಾಪು ಮುದರಂಗಡಿಯಲ್ಲಿ ಹವಾ ಮೇಂಟೈನ್ ಮಾಡಿದ್ದ ವ್ಯಕ್ತಿ. ಗ್ರಾಮ ಪಂಚಾಯತ್ ಅಧ್ಯಕ್ಷನಾಗಿ ಜನಾನುರಾಗಿಯಾಗಿ ಕೆಲಸ ಮಾಡಿದ್ದ ಡೇವಿಡ್, ತನ್ನದೇ ಗ್ರಾಮದಲ್ಲಿ ಹಾಡು ಹಗಲೇ ಬೀದಿ ಹೆಣವಾಗಿದ್ದು ಮಾತ್ರ ದುರಂತ. ಶೂಟೌಟಿಗೆ ಬಲಿಯಾದ ಈ ದೃಶ್ಯವನ್ನು ಒಮ್ಮೆ ನೋಡಿ, ಯಾವುದೇ ಭಯವಿಲ್ಲದೆ ಮುಖಕ್ಕೆ ಮಾಸ್ಕು ಕೂಡ ಧರಿಸದೆ ತಲೆ ಮತ್ತು ಎದೆಗೆ ಬಂದು ಗುಂಡು ಹೊಡೆದ ದುಷ್ಕರ್ಮಿಗಳ ಈ ಹುಚ್ಚಾಟ, ಕೇವಲ ಕರಾವಳಿ ಮಾತ್ರವಲ್ಲ ರಾಜ್ಯವನ್ನೇ ಬೆಚ್ಚಿ ಬೆಳಿಸಿತ್ತು. ಈ ಘಟನೆ ನಡೆದು ಕೇವಲ ಎಂಟು ಗಂಟೆಗಳಲ್ಲಿ ಮೂವರು ಪ್ರಮುಖ ಆರೋಪಿಗಳ ಹೆಡೆಮುರಿ ಕಟ್ಟಲು ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊಲೆಯ ನಂತರದ ಘಟನೆಗಳು ರೋಚಕವಾಗಿದೆ. ಪ್ರಮುಖ ಮೂವರು ಆರೋಪಿಗಳು ಉಡುಪಿ ಜಿಲ್ಲೆಯ ಉತ್ತರ ಭಾಗದಿಂದ ಅನ್ಯ ರಾಜ್ಯಕ್ಕೆ ಎಸ್ಕೇಪಾಗಲು ಸಂಚು ಮಾಡಿದ್ದರು. ಆದರೆ ಬಸ್ ಮೂಲಕ ಹೊರಟಿದ್ದ ಇವರನ್ನು ತಪಾಸಣೆ ನಡೆಸುವ ವೇಳೆ ಪೊಲೀಸರು ಅಡ್ಡಗಟ್ಟಿದ್ದರು. ಬೈಂದೂರು ತಾಲೂಕಿನ ಒತ್ತಿನಣೆ ಪರಿಸರದಲ್ಲಿ ಈ ಮೂವರು ಪೊಲೀಸರ ಬಲೆಗೆ ಬಿದ್ದರು. ಇನ್ನು ನಮ್ಮ ಆಟ ನಡೆಯಲ್ಲ ಅಂತ ಗೊತ್ತಾಗುತ್ತಿದ್ದಂತೆ, ಸ್ಥಳದಿಂದ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾರೆ.
ಈ ವೇಳೆ ಪೊಲೀಸರ ಜೊತೆ ಚಕಮಕಿ ಉಂಟಾಗಿದೆ. ಕಾಪು ಎಸ್ ಐ ತೇಜಸ್ವಿ ಗೆ ಹಲ್ಲೆ ನಡೆಸಲು ಮುಂದಾದ ಪ್ರಮುಖ ಆರೋಪಿ ರಾಜು ಎಂಬಾತನ ಬಲಗಾಲಿಗೆ ಪೊಲೀಸರು ಶೂಟ್ ಮಾಡಿದ್ದಾರೆ. ಇದೇ ಸಂದರ್ಭದ ಲಾಭ ಪಡೆದುಕೊಂಡ ಮತ್ತಿಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಆದರೆ ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಓರ್ವ ಆರೋಪಿಯನ್ನು ಕುಮಟಾದಲ್ಲಿ ಹಾಗೂ ಮತ್ತೊಬ್ಬನನ್ನು ಭಟ್ಕಳದಲ್ಲಿ ಬಂಧಿಸಿದ್ದಾರೆ. ಹಾಗಾಗಿ ಉತ್ತರ ಭಾರತದ ಶೂಟರ್ ರಾಜು ಜೊತೆಗೆ, ಉತ್ತರಕಾಂಡ್ ಮೂಲದ ಅಜಯ್ ರಸ್ತೋಗಿ ಹಾಗೂ ಬಿಹಾರದ ಜಿಯಾವುಲ್ ವಜುಲ್ ಶೇಕ್ ಬಂಧಿತರಾಗಿದ್ದಾರೆ.
ಬಂಧಿತರು ಸುಪಾರಿ ಪಡೆದವರು. ಆದರೆ ಇವರಿಗೆ ಫಂಡಿಂಗ್ ಮಾಡಿದ ವ್ಯಕ್ತಿ ಯಾರು ಅನ್ನೋದು ಪೊಲೀಸರು ಪತ್ತೆ ಹಚ್ಚಬೇಕು. ಉಡುಪಿಯ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಗುತ್ತಿಗೆದಾರನಾಗಿದ್ದ ಡೇವಿಡ್ ಗೆ, ಉತ್ತರ ಭಾರತದ ಉದ್ಯಮಿಯೊಬ್ಬರು ಕಾಮಗಾರಿ ಒಂದರ ಗುತ್ತಿಗೆ ನೀಡಿದ್ದರು. ಆದರೆ ಆ ಉದ್ಯಮಿ ಡೇವಿಡ್ ಗೆ ಬಾಕಿ ಹಣ ಪಾವತಿಸಿರಲಿಲ್ಲ. ಈ ವಿಚಾರವಾಗಿ ವೈಷಮ್ಯ ಉಂಟಾಗಿ, ಅಂದಾಜು ಎರಡು ಮೂರು ಕೋಟಿಯ ಸ್ವತ್ತುಗಳನ್ನು ಡೇವಿಡ್ ತನ್ನ ವಶದಲ್ಲೇ ಇರಿಸಿಕೊಂಡಿದ್ದ. ಇದಕ್ಕೆ ಪ್ರತಿಯಾಗಿ ಉದ್ಯಮಿ ಈ ಕೊಲೆಗೆ, ಸುಪಾರಿ ಕೊಟ್ಟಿದ್ದ ಅನ್ನೋದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಈ ಬಹುಕೋಟಿ ವ್ಯವಹಾರವೇ ಕೊಲೆಗೆ ಕಾರಣ, ಊರಿಗೆ ದೇವರಂತಿದ್ದ ತನ್ನ ಪತಿಯನ್ನು ಕೊಂದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಪತ್ನಿ ಪ್ರಿಯ ಒತ್ತಾಯಿಸಿದ್ದಾರೆ.
ಜನಪ್ರತಿನಿಧಿಯಾಗಿ ಪ್ರಖ್ಯಾತನಾಗಿದ್ದ ಡೇವಿಡ್, ತನ್ನ ಅಪರಾಧಿ ಕೃತ್ಯಗಳಿಂದ ಕುಖ್ಯಾತಿಯನ್ನು ಪಡೆದಿದ್ದ. ಡೇವಿಡ್ ವಿರುದ್ಧ ಸುಮಾರು 21 ಕೇಸುಗಳಿದ್ದು, ಪರಿಸರ ಪ್ರೇಮಿಗಳನ್ನು ಬೆದರಿಸಿದ ಪ್ರಕರಣವು ಸೇರಿದಂತೆ, ಪಾದ್ರಿಯೊಬ್ಬರ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಪ್ರಕರಣ ಸದ್ದು ಮಾಡಿತ್ತು. ಪ್ರಿನ್ಸ್ ಎಂದು ಕರೆಸಿಕೊಳ್ಳುವ ಶೋಕಿ ಹೊಂದಿದ್ದ ಮತ್ತು ಸದಾ ಕಾಲ ಪಿಸ್ತೂಲು ಹಿಡಿದು ಬೇರೆಯವರನ್ನು ಬೆದರಿಸುತ್ತಿದ್ದ ವ್ಯಕ್ತಿ ಇದೀಗ ಸ್ವತಹ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿರುವುದು ದುರಂತವೇ ಸರಿ.

