ಉಡುಪಿ: ಉಡುಪಿ ಜಿಲ್ಲಾಡಳಿತ, ಕಾಪು ಪುರಸಭೆ, ಸ್ವಚ್ಛಂ ವಾಟರ್ ಅಡ್ವೆಂಚರ್, ವಿವಿಧ ಸಂಘ–ಸಂಸ್ಥೆಗಳು ಹಾಗೂ ಶಾಲಾ–ಕಾಲೇಜು ವಿದ್ಯಾರ್ಥಿಗಳ ಸಹಯೋಗದಲ್ಲಿ ಕಾಪು ಬೀಚ್‌ನಲ್ಲಿ ಭಾನುವಾರ ಸ್ವಚ್ಛತಾ ಅಭಿಯಾನ ನಡೆಯಿತು.

ಬೀಚ್ ಸುತ್ತಮುತ್ತ ಪ್ರವಾಸಿಗರು ಎಸೆದಿದ್ದ ಪ್ಲಾಸ್ಟಿಕ್ ಸೇರಿದಂತೆ ವಿವಿಧ ತ್ಯಾಜ್ಯವನ್ನು ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಸಂಗ್ರಹಿಸಿ, ಪುರಸಭೆಗೆ ಹಸ್ತಾಂತರಿಸಿದರು. ಬೀಚ್‌ನ ಸ್ವಚ್ಛತೆ ಕಾಪಾಡುವ ಮೂಲಕ ಪ್ರವಾಸಿಗರಿಗೆ ಸ್ವಚ್ಛ ಹಾಗೂ ಸುಂದರ ಪರಿಸರ ಒದಗಿಸುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಅಭಿಯಾನದಲ್ಲಿ ಕಾಪು ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತ, ಅಧ್ಯಕ್ಷೆ ಮೋಹಿನಿ ಶೆಟ್ಟಿ, ಸಮುದಾಯ ಸಂಘಟನಾಧಿಕಾರಿಗಳಾದ ರತ್ನಾಕರ ಶೆಟ್ಟಿ, ವಿದ್ಯಾಲತಾ, ನೂರುದ್ದಿನ್, ಉಮೇಶ್ ಕರ್ಕೇರ, ವಾಣಿ ಆಳ್ವ, ಹಿರಿಯ ಆರೋಗ್ಯ ನಿರೀಕ್ಷಕ ಅನ್ವರ್ ಅಲಿ, ರೋಟರಿ ಕ್ಲಬ್ ಕಲ್ಯಾಣಪುರದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.

ಸ್ವಚ್ಛಂ ಗ್ರೂಪ್‌ನ ತಾರಾನಾಥ್, ಗುರುಪ್ರಸಾದ್, ದನ್ಪಾಲ್ ಕೋಟ್ಯಾನ್, ಚಂದ್ರಶೇಖರ್ ಮೆಂಡನ್, ನಿತಿನ್, ಅಭಿಲಾಷ್ ಭಟ್ ಸೇರಿದಂತೆ ವಿವಿಧ ಸಂಘ–ಸಂಸ್ಥೆಗಳ ಪ್ರತಿನಿಧಿಗಳು, ಶಾಲಾ–ಕಾಲೇಜು ವಿದ್ಯಾರ್ಥಿಗಳು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.