ಉಡುಪಿ: ಸಾರ್ವಜನಿಕ ರಸ್ತೆಯಲ್ಲಿ ಬೇಜವಾಬ್ದಾರಿಯಿಂದ ಪಟಾಕಿ ಸಿಡಿಸಿ, ಸಾರ್ವಜನಿಕರು ಹಾಗೂ ವಾಹನ ಸವಾರರ ಮೇಲೆ ಪಟಾಕಿ ಎಸೆದು ಉಪಟಳ ಉಂಟುಮಾಡಿದ ಆರೋಪದ ಮೇರೆಗೆ 15 ಮಂದಿಯ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ.8ರಂದು ರಾತ್ರಿ 11 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಾಂಡವಿ ಎಮರಾಲ್ಡ್ ಅಪಾರ್ಟ್ಮೆಂಟ್ ಎದುರಿನ ಸಾರ್ವಜನಿಕ ರಸ್ತೆಯಲ್ಲಿ 15ರಿಂದ 20 ಮಂದಿ ಗುಂಪುಗೂಡಿಕೊಂಡು ಪಟಾಕಿ ಸಿಡಿಸುತ್ತಿದ್ದರು. ಅಲ್ಲದೆ, ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು, ವಾಹನ ಸವಾರರು ಹಾಗೂ ವಾಹನಗಳ ಮೇಲೆ ಪಟಾಕಿಗಳನ್ನು ಎಸೆಯುತ್ತಿದ್ದರು ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ಪಡೆದ ಮಣಿಪಾಲ ಪೊಲೀಸರು ಸ್ಥಳಕ್ಕೆ ಧಾವಿಸಿದಾಗಲೂ ಆರೋಪಿತರು ಪಟಾಕಿ ಸಿಡಿಸಿ, ಕೈಯಲ್ಲಿ ಹಿಡಿದುಕೊಂಡು ಸಾರ್ವಜನಿಕರು ಹಾಗೂ ವಾಹನಗಳ ಮೇಲೆ ಎಸೆಯುತ್ತಿದ್ದರು. ಈ ಕೃತ್ಯದಿಂದ ಅನಿಲ್, ಕೀರ್ತಿ, ಡೆನಿಸ್, ರವಿಶೆಟ್ಟಿ ಮತ್ತು ಜ್ಞಾನೇಶ್ವರ ಎಂಬವರು ತೊಂದರೆಗೊಳಗಾಗಿದ್ದು, ಘಟನೆಯ ಪ್ರತ್ಯಕ್ಷ ಸಾಕ್ಷಿಗಳಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕರ್ತವ್ಯದಲ್ಲಿದ್ದ ಸಮವಸ್ತ್ರಧಾರಿ ಪೊಲೀಸರ ಸೂಚನೆಗಳನ್ನು ಪಾಲಿಸದೆ, ಅವರ ಮೇಲೆಯೂ ಪಟಾಕಿ ಎಸೆದು ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪವೂ ಇದೆ. ಈ ಸಂಬಂಧ ಪೊಲೀಸ್ ಉಪನಿರೀಕ್ಷಕ ಶಂಭುಲಿಂಗಯ್ಯ ಎಂ.ಈ. ಅವರು ದೂರು ನೀಡಿದ್ದು, ಆರ್ಯನ್ ಕುಮಾರ್, ಆದಿತ್ಯ ಪ್ರಜಾಪತಿ, ಪ್ರಿಯಾಂಶ್, ಸಿದ್ದಾಂತ್ ಸಿಂಗ್, ಪ್ರಿಯಜಿತ್ ಸಿಂಗ್ ಸೇರಿದಂತೆ ಇತರ 15 ಮಂದಿಯ ವಿರುದ್ಧ ನ್ಯಾಯಾಲಯದ ಅನುಮತಿ ಪಡೆದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿತರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಕಲಂ 224, 292 ಹಾಗೂ 3(5)ರ ಅಡಿಯಲ್ಲಿ ಅ.ಕ್ರ. 184/2026ರಂತೆ ಪ್ರಕರಣ ದಾಖಲಾಗಿದೆ.

