ಉಡುಪಿ: ಪರಿಸರ ಸಂರಕ್ಷಣೆ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕೆನರಾ ಬ್ಯಾಂಕ್‌ನ 5ನೇ ಆವೃತ್ತಿಯ ‘ಫ್ರೀಡಂ ರನ್’ ಕಾರ್ಯಕ್ರಮವನ್ನು ಆಗಸ್ಟ್‌ 9ರಂದು ಮಣಿಪಾಲದ ಕೆನರಾ ಬ್ಯಾಂಕ್ ವೃತ್ತ ಕಚೇರಿಯಲ್ಲಿ ಆಯೋಜಿಸಲಾಗಿದೆ ಎಂದು ಬ್ಯಾಂಕಿನ ಸೀನಿಯರ್ ಮ್ಯಾನೇಜರ್ ಸಚಿನ್ ಶೆಟ್ಟಿ ತಿಳಿಸಿದರು.

ಉಡುಪಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷದ ಫ್ರೀಡಂ ರನ್‌ ಅನ್ನು ‘ಗೋ ಗ್ರೀನ್’ ಪರಿಕಲ್ಪನೆಯಡಿ ಆಯೋಜಿಸಲಾಗಿದ್ದು, ಪರಿಸರ ಸಂರಕ್ಷಣೆ ಹಾಗೂ ಆರೋಗ್ಯಕರ ಜೀವನಶೈಲಿಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

21 ಕಿ.ಮೀ., 10 ಕಿ.ಮೀ., 5 ಕಿ.ಮೀ., 3 ಕಿ.ಮೀ. ಹಾಗೂ ಫನ್ ರನ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, ಬೆಳಿಗ್ಗೆ 5 ಗಂಟೆಗೆ ಫ್ರೀಡಂ ರನ್‌ಗೆ ಚಾಲನೆ ನೀಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಭಾಗವಹಿಸಲು ಆನ್‌ಲೈನ್ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಮ್ಯಾನೇಜರ್‌ಗಳಾದ ದುರ್ಗಾಪ್ರಸಾದ್, ಸೂರಜ್ ಉಳ್ಳೂರು, ಸಿದ್ದಾರ್ಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.