ಉಡುಪಿ: ಸೌಂದರ್ಯ ತಜ್ಞೆಯರು (ಬ್ಯೂಟಿಷಿಯನ್) ಮಹಿಳೆಯರನ್ನು ಸುಂದರರನ್ನಾಗಿ ಮಾಡುವುದು ಮಾತ್ರವಲ್ಲ, ಅವರಲ್ಲಿ ಆತ್ಮವಿಶ್ವಾಸವನ್ನು ವೃದ್ಧಿಸುವ ಕೆಲಸ ಮಾಡುತ್ತಾರೆ ಎಂದು ಯುವ ವಾಣಿಜ್ಯ ಮಹಿಳಾ ಉದ್ಯಮಿ ಮಹಾಲಸಾ ಕಿಣಿ ಹೇಳಿದರು.

ಅಖಿಲ ಕರ್ನಾಟಕ ಮಹಿಳಾ ಸೌಂದರ್ಯ ತಜ್ಞೆಯರ ಸಂಘ ಉಡುಪಿ ಇದರ ಆಶ್ರಯದಲ್ಲಿ ಉಡುಪಿಯ ಮದರ್ ಆಫ್ ಸೊರೊಸ್ ಚರ್ಚ್ ನ ಅವೇ ಮರಿಯಾ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ “ಸೌಂದರ್ಯ ತಜ್ಞೆಯರ ದಿನಾಚರಣೆ ಹಾಗೂ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬ್ಯೂಟಿಷಿಯನ್ ಕೂಡ ಒಂದು ಕಲೆ. ಅದು ಎಲ್ಲರಲ್ಲೂ ಕರಗತವಾಗುವುದಿಲ್ಲ‌. ಅದಕ್ಕೂ ವಿಭಿನ್ನವಾದ ನೈಪುಣ್ಯತೆ ಬೇಕು. ಬ್ಯೂಟಿಷಿಯನ್ ಒಂದು ಮ್ಯಾಜಿಕ್. ಆ ಮ್ಯಾಜಿಕ್ ನಮ್ಮನ್ನು ಅಂದವಾಗಿ ಕಾಣುವಂತೆ ಮಾಡುತ್ತೆ ಎಂದರು.

ಯಾವುದೇ ಕಾರಣಕ್ಕೂ ಬ್ಯೂಟಿ ಪಾರ್ಲರ್ ಗೆ ಹೋದರೂ ಅಲ್ಲಿಂದ ಹೊರಬರುವಾಗ ಖುಷಿಯಿಂದಲೇ ಹೊರಬರುತ್ತಾರೆ. ಆ ರೀತಿಯ ವಿಶ್ವಾಸವನ್ನು ನಮ್ಮಲ್ಲಿ ಸೌಂದರ್ಯ ತಜ್ಞೆಯರು ತುಂಬುತ್ತಾರೆ. ಸಮಾಜದಲ್ಲಿ ಹತ್ತಾರು ಸಂಘಟನೆಗಳಿವೆ. ಆದರೆ ನಿಮ್ಮ ಸಂಘಟನೆ ಕಳೆದ ಎರಡು ವರ್ಷಗಳಲ್ಲಿ ಮಾಡುತ್ತಿರುವ ಸಾಮಾಜಿಕ ಕಾರ್ಯಗಳು ಶ್ಲಾಘನೀಯ.

ನಿಮ್ಮ ಕಾರ್ಯ ಇನ್ನಷ್ಟು ಜನರಿಗೆ ತಿಳಿಯಬೇಕು. ಆಗ ನಿಮಗೆ ಮತ್ತಷ್ಟು ಪ್ರೋತ್ಸಾಹ ಸಿಕ್ಕಿ, ನಿಮ್ಮ ಸಂಘಟನೆಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಲು ಸಾಧ್ಯವಾಗುತ್ತದೆ. ಈಗ ಎಲ್ಲ ಕಡೆ ಮಹಿಳಾ ಸಬಲೀಕರಣದ ಕೂಗು ಕೇಳಿ ಬರುತ್ತಿದೆ. ಆದರೆ ಈ ಸಂಸ್ಥೆಯನ್ನು ನೋಡಿದಾಗ ನೀವೆಲ್ಲ ಈಗಾಗಲೇ ಸಬಲರಾಗಿದ್ದೀರಿ ಅಂತಾ ಕಾಣುತ್ತೆ. ಅದನ್ನು ಹೀಗೆ ಮುಂದುವರಿಸಿ ಎಂದು‌ ಹಾರೈಸಿದರು.

ಅಖಿಲ ಕರ್ನಾಟಕ ಮಹಿಳಾ ಸೌಂದರ್ಯ ತಜ್ಞೆಯರ ಸಂಘದ ಉಡುಪಿ ಜಿಲ್ಲಾಧ್ಯಕ್ಷೆ ಕಿಶ್ವರ್ ಜಹಾನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ನಂದಾ ಶೆಟ್ಟಿ, ಜಿಲ್ಲಾ ಲೆಕ್ಕಪರಿಶೋಧಕಿ ಗೀತಾ ದಯಾನಂದ್, ಜಿಲ್ಲಾ ಪಿಆರ್ ಓ ಪ್ರಿಯಾ ಉದಯ್ ಶೆಟ್ಟಿ, ಸ್ಥಾಪಕ ಅಧ್ಯಕ್ಷೆ ಮರಿಯಾ ಹೆರಾಲ್ಡ್, ಸ್ಥಾಪಕ ಕಾರ್ಯದರ್ಶಿ ವೇದ ಸುವರ್ಣ, ಸ್ಥಾಪಕ ಕೋಶಾಧಿಕಾರಿ ಭಾರತಿ ಕೆ. ಶ್ರೀಯಾನ್, ಬೈಂದೂರು ವಲಯಾಧ್ಯಕ್ಷೆ ಗುಲಾಬಿ ನಾಗರಾಜ್, ಕುಂದಾಪುರ ವಲಯಾಧ್ಯಕ್ಷೆ ಸುನಿತಾ ಗಣೇಶ್, ಬ್ರಹ್ಮಾವರ ವಲಯಾಧ್ಯಕ್ಷೆ ಜ್ಯೋತಿ ಎಸ್‌ ಪೂಜಾರಿ, ಉಡುಪಿ ವಲಯಾಧ್ಯಕ್ಷೆ ಸಂಧ್ಯಾ ರಮೇಶ್, ಕಾಪು ವಲಯಾಧ್ಯಕ್ಷೆ ರಾಜೇಶ್ವರಿ ಅವಿನಾಶ್, ಹೆಬ್ರಿ ವಲಯಾಧ್ಯಕ್ಷೆ ಪ್ರಿಯಾಂಕ ಪ್ರಕಾಶ್ ಶೆಟ್ಟಿ, ಕಾರ್ಕಳ ವಲಯಾಧ್ಯಕ್ಷೆ ಗೀತಾ ಭಾಸ್ಕರ್ ಉಪಸ್ಥಿತರಿದ್ದರು.