ಉಡುಪಿ: ಮಣಿಪಾಲ ಈಶ್ವರನಗರದ ಜನನಿ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಸಮೀಪ ಯುವಕನ ಮೇಲೆ ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ನಿಟ್ಟೆಯ ಎಂಜಿನಿಯರಿಂಗ್‌ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಶಿವಮೊಗ್ಗ ಮೂಲದ ಅಕ್ಷಯ್‌ ಎ. (21), ಪುನೀತ್‌ ಎಸ್‌. (21), ಶಮಂತ್‌ ಕೆ.ಆರ್‌. (21) ಹಾಗೂ ಯಶವಂತ್‌ ಬಿ.ಜೆ. (21) ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆಗಸ್ಟ್‌ 2ರ ರಾತ್ರಿ ಹೆರ್ಗ ಗ್ರಾಮದ ಈಶ್ವರನಗರದ ಜನನಿ ಬಾರ್‌ ಸಮೀಪ ಯಶ್‌ರಾಜ್‌ ಅವರು ತಮ್ಮ ಪವನ್‌ ಕುಮಾರ್‌ ಹಾಗೂ ಸ್ನೇಹಿತ ಶ್ರೇಯಸ್‌ ಜೊತೆ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ, ಎರಡು ಕಾರುಗಳಲ್ಲಿ ಬಂದ ಆರೋಪಿಗಳು ಪವನ್‌ ಕುಮಾರ್‌ನನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಳಿಕ ಕೈಯಿಂದ ಹಲ್ಲೆ ನಡೆಸಿ, ಕಾಲಿನಿಂದ ತುಳಿದು, ಮೆಟಲ್‌ ಪಂಚ್‌ನಿಂದ ಮುಖಕ್ಕೆ ಗುದ್ದಿ ಮೂಗಿಗೆ ಗಂಭೀರ ಗಾಯಗೊಳಿಸಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಯಶ್‌ರಾಜ್‌ ಹಾಗೂ ಶ್ರೇಯಸ್‌ ಮೇಲೂ ಹಲ್ಲೆ ನಡೆಸಿ, ಅವರ ಬಟ್ಟೆಗಳನ್ನು ಹರಿದು, ಜೀವ ಬೆದರಿಕೆ ಹಾಕಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಸಂಬಂಧ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖೆಯ ವೇಳೆ ಆರೋಪಿಗಳೆಲ್ಲರೂ ನಿಟ್ಟೆಯ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳಾಗಿರುವುದು ತಿಳಿದುಬಂದಿದೆ.