ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಉಡುಪಿಯಲ್ಲಿ ಅಷ್ಟಮಿ ಸಂಭ್ರಮ ಗರಿಗೆದರಿದ್ದು, ನಗರದ ರಸ್ತೆಗಳೆಲ್ಲೆಡೆ ಹುಲಿವೇಷ ಸೇರಿದಂತೆ ಬಗೆಬಗೆಯ ವೇಷಧಾರಿಗಳ ಕಲರವ ಕಂಡುಬರುತ್ತಿದೆ. ಪ್ರಖ್ಯಾತ ಹುಲಿವೇಷ ತಂಡಗಳ ಆಕರ್ಷಕ ನರ್ತನ ಅಷ್ಟಮಿ ಸಂಭ್ರಮಕ್ಕೆ ವಿಶೇಷ ಮೆರುಗು ನೀಡಿದೆ.
ಈ ಬಾರಿ ಉಡುಪಿ ನಗರದಲ್ಲಿ 40ಕ್ಕೂ ಅಧಿಕ ಹುಲಿವೇಷ ತಂಡಗಳು ಅಷ್ಟಮಿ ಉತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸಂಪ್ರದಾಯಿಕ ಹುಲಿವೇಷಗಳ ಜತೆಗೆ ಮಹಿಳೆಯರ ಹುಲಿವೇಷ ತಂಡಗಳು ಸಾರ್ವಜನಿಕರ ಗಮನ ಸೆಳೆಯುತ್ತಿವೆ.
ಆಶೋಕ್ ರಾಜ್ ಕಾಡುಬೆಟ್ಟು ಅವರ ಪುತ್ರಿ ಸುಸ್ಮಾ ರಾಜ್ ನೇತೃತ್ವದ ತಂಡದ ಹುಲಿಕುಣಿತ ಹಾಗೂ ದರ್ಪಣ ಮತ್ತು ಇಷ್ಟಸಿದ್ಧಿ ಮಹಾಲಿಂಗೇಶ್ವರ ತಂಡಗಳ ಆಕರ್ಷಕ ಹುಲಿವೇಷ ನರ್ತನ ಜನರನ್ನು ರಂಜಿಸಿತು. ವಿವಿಧ ಭಾಗಗಳಿಂದ ಆಗಮಿಸಿದ ಹುಲಿವೇಷಧಾರಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಹೆಜ್ಜೆ ಹಾಕಿ ಅಷ್ಟಮಿ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು.
ಉಡುಪಿಯ ದರ್ಪಣ ಮಹಿಳಾ ತಂಡದ ಹುಲಿವೇಷ ನರ್ತನ ವಿಶೇಷ ಆಕರ್ಷಣೆಯಾಗಿತ್ತು. ಕೋರಂಗರಪಾಡಿಯ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಲೋಬಾನ ಪೂಜೆ ನೆರವೇರಿಸಿದ ಬಳಿಕ ಮಹಿಳಾ ಹುಲಿವೇಷಧಾರಿಗಳು ತಂಡವಾಗಿ ಹೆಜ್ಜೆ ಹಾಕಿದರು. ಅವರೊಂದಿಗೆ ಯುವತಿಯರೂ ಕುಣಿದು ಸಂಭ್ರಮಿಸಿದರು.
ಎರಡು ದಿನಗಳ ಕಾಲ ನಗರದೆಲ್ಲೆಡೆ ಮಹಿಳಾ ಹುಲಿವೇಷಧಾರಿಗಳ ಸಂಚಾರ ನಡೆಯಲಿದ್ದು, ಈ ಬಾರಿ ಅಷ್ಟಮಿ ಉತ್ಸವದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ವಿಶೇಷವಾಗಲಿದೆ.
ಕೃಷ್ಣಾರಾಧನೆಯಲ್ಲಿ ಭಕ್ತರು: ಶುಕ್ರವಾರ ಶ್ರೀಕೃಷ್ಣ ಜನ್ಮಾಷ್ಟಮಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಧಾರ್ಮಿಕ ಸಂಭ್ರಮ ಮನೆ ಮಾಡಿದೆ. ಭಕ್ತರು ಹಗಲೆಲ್ಲ ಉಪವಾಸ ಆಚರಿಸಿ ಕೃಷ್ಣದೇವರ ಆರಾಧನೆಯಲ್ಲಿ ತೊಡಗಿದ್ದಾರೆ. ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಕೃಷ್ಣದರ್ಶನಕ್ಕಾಗಿ ಉಡುಪಿಗೆ ಆಗಮಿಸುತ್ತಿದ್ದಾರೆ.
ಶ್ರೀಕೃಷ್ಣ ಮಠವು ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿದ್ದು, ಕೃಷ್ಣನ ಜನ್ಮೋತ್ಸವಕ್ಕಾಗಿ ವಿಶೇಷ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಪರ್ಯಾಯ ಶಿರೂರು ಮಠದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಕೃಷ್ಣದೇವರಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಮಧ್ಯರಾತ್ರಿ ಕೃಷ್ಣದೇವರಿಗೆ ಅರ್ಘ್ಯ ಸಮರ್ಪಣೆ ನಡೆಯಲಿದ್ದು, ರಾತ್ರಿ 12.12ಕ್ಕೆ ಅರ್ಘ್ಯ ಸಮರ್ಪಿಸುವ ಸಂಪ್ರದಾಯ ನಡೆಯಲಿದೆ. ಕೃಷ್ಣ ಮಠದಲ್ಲಿ ಮುದ್ದುಕೃಷ್ಣ ಸ್ಪರ್ಧೆಯೂ ಆಯೋಜಿಸಲಾಗಿದೆ.
ಕೃಷ್ಣದೇವರಿಗೆ ಅರ್ಪಿಸಲು ವಿವಿಧ ಬಗೆಯ ಉಂಡೆ, ಚಕ್ಕುಲಿ ಸೇರಿದಂತೆ ಸಾಂಪ್ರದಾಯಿಕ ಖಾದ್ಯಗಳನ್ನು ಭಕ್ತರು ಸಿದ್ಧಪಡಿಸುತ್ತಿದ್ದಾರೆ.
ನಾಳೆ ವಿಟ್ಲಪಿಂಡಿ ವೈಭವ: ಶನಿವಾರ ಶ್ರೀಕೃಷ್ಣ ಲೀಲೋತ್ಸವ ಹಾಗೂ ವಿಟ್ಲಪಿಂಡಿ ಮಹೋತ್ಸವ ನಡೆಯಲಿದ್ದು, ಇದಕ್ಕಾಗಿ ಉಡುಪಿ ನಗರದಲ್ಲಿ ಭರದ ಸಿದ್ಧತೆ ನಡೆದಿದೆ. ಹುಲಿವೇಷ, ವಿವಿಧ ವೇಷಗಳು ಹಾಗೂ ಸಾಂಪ್ರದಾಯಿಕ ಕಲಾತಂಡಗಳ ಪ್ರದರ್ಶನದಿಂದ ಉಡುಪಿ ನಗರ ಕೃಷ್ಣೋತ್ಸವದ ಸಂಭ್ರಮದಲ್ಲಿ ಮುಳುಗಲಿದೆ.

