ಉಡುಪಿ: ಮಳೆಗಾಲ ಆರಂಭವಾಗುತ್ತಿದ್ದಂತೆ ಸಾಮಾನ್ಯ ತೊರೆಗಳೂ ಮೈದುಂಬಿ ಹರಿದು ಜಲಪಾತಗಳ ರೂಪ ಪಡೆಯುತ್ತವೆ. ಮಣಿಪಾಲದ ಸಮೀಪದ ಅರ್ಬಿ ಜಲಪಾತವೂ ಸತತ ಮಳೆಯಿಂದ ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.

ಮಣಿಪಾಲದಿಂದ ಅಲೆವೂರು ಮಾರ್ಗವಾಗಿ ಸುಮಾರು 3 ಕಿ.ಮೀ ಸಾಗಿದರೆ ದಶರಥ ಎಂಬ ಪ್ರದೇಶ ಸಿಗುತ್ತದೆ. ಅಲ್ಲಿಂದ ಪೂರ್ವಾಭಿಮುಖವಾಗಿ ವೈಷ್ಣವಿ ದುರ್ಗಾ ದೇವಸ್ಥಾನದ ಕಡೆಗೆ ಸುಮಾರು ಒಂದು ಕಿ.ಮೀ ಸಾಗಿದರೆ ದೇವಸ್ಥಾನದ ಪಕ್ಕದಲ್ಲೇ ಅರ್ಬಿ ಜಲಪಾತವನ್ನು ಕಾಣಬಹುದು. ಉಡುಪಿ ಜಿಲ್ಲೆಯ 80ನೇ ಬಡಗಬೆಟ್ಟು ಗ್ರಾಮದ ಅರ್ಬಿಕೋಡಿ ವ್ಯಾಪ್ತಿಯಲ್ಲಿ ಈ ಜಲಪಾತವಿದೆ.

ದಟ್ಟ ಕಾನನದ ನಡುವೆ ಇಳಿಜಾರಿನಲ್ಲಿ ಕಲ್ಲುಗಳಿಂದ ಕಲ್ಲಿಗೆ ಹಂತ ಹಂತವಾಗಿ ಹರಿಯುವ ಶುಭ್ರ ನೀರು ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ಹಲವು ಕವಲುಗಳಾಗಿ ಧುಮ್ಮಿಕ್ಕುವ ನೀರಿನ ದೃಶ್ಯ ಕ್ಷೀರಧಾರೆಯ ಅನುಭವ ನೀಡುತ್ತಿದೆ. ಮಳೆ ಬಂದಾಗ ಮಾತ್ರ ಮೈದೋರುವ ಈ ಕಿರು ಜಲಪಾತ ಮಣಿಪಾಲ ಮಹಾನಗರದ ಜನರಿಗೆ ಪ್ರಕೃತಿಯ ಮಡಿಲಲ್ಲಿ ಕೆಲಕಾಲ ಕಳೆಯಲು ಉತ್ತಮ ತಾಣವಾಗಿದೆ.

ವಾರಾಂತ್ಯದಲ್ಲಿ ಮಾತ್ರವಲ್ಲದೆ ಪ್ರತಿದಿನವೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಜಲಪಾತದ ಸೌಂದರ್ಯ ಸವಿಯಲು ಬರುತ್ತಿದ್ದಾರೆ. ಜನಸಂಚಾರದಿಂದ ದೂರವಿರುವ ಪ್ರದೇಶವಾಗಿರುವುದರಿಂದ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಪ್ರಕೃತಿಯ ನಡುವೆ ಸಮಯ ಕಳೆಯಲು ಹಲವರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.

ಸಣ್ಣ ತೊರೆಗಳಿಂದ ರೂಪುಗೊಳ್ಳುವ ಈ ಜಲಪಾತ ಸಾಮಾನ್ಯವಾಗಿ ಅಪಾಯಕಾರಿಯಲ್ಲದಿದ್ದರೂ, ನಿರಂತರ ಮಳೆಯಿಂದ ಕಲ್ಲುಗಳು ಜಾರುವಂತಾಗಿರುವುದರಿಂದ ಪ್ರವಾಸಿಗರು ಎಚ್ಚರಿಕೆ ವಹಿಸುವುದು ಅಗತ್ಯ. ಜಲಪಾತದ ಸುತ್ತಮುತ್ತ ಜಾರುವ ಕಲ್ಲುಗಳ ಮೇಲೆ ಸಂಚರಿಸುವಾಗ ಹಾಗೂ ನೀರಿನ ಹರಿವಿನಲ್ಲಿ ಇಳಿಯುವಾಗ ಮುನ್ನೆಚ್ಚರಿಕೆ ವಹಿಸುವಂತೆ ಸ್ಥಳೀಯರು ಸಲಹೆ ನೀಡಿದ್ದಾರೆ.