ಉಡುಪಿ: ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುವವರ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ನೂತನ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜನತೆಗೆ ದಕ್ಷ ಹಾಗೂ ಪಾರದರ್ಶಕ ಆಡಳಿತ ನೀಡಲು ಪ್ರಯತ್ನಿಸುತ್ತೇನೆ. ನಿರ್ಗಮನ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರು ಈಗಾಗಲೇ ಜಿಲ್ಲೆಯ ಕುರಿತು ಸಾಕಷ್ಟು ಮಾಹಿತಿ, ಮಾರ್ಗದರ್ಶನಗಳನ್ನು ನೀಡಿದ್ದಾರೆ.

ಆಡಳಿತದಲ್ಲಿ ನಾನು ಈಗಾಗಲೇ ಪಡೆದಿರುವ ಅನುಭವ, ಹಿರಿಯ ಅಧಿಕಾರಿಗಳಿಂದ ಪಡೆಯುವ ಸಲಹೆ, ಮಾಹಿತಿಗಳ ಮೂಲಕ ಕಾನೂನಿನ ಚೌಕಟ್ಟಿನಲ್ಲಿ ನನ್ನ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸವಿದೆ ಎಂದರು.

ಉಡುಪಿ ಜಿಲ್ಲೆಯಲ್ಲಿ ಹಲವು ದೀರ್ಘಕಾಲದಿಂದ ಇರುವ ಸಮಸ್ಯೆಗಳಿವೆ. ಮರಳು ಗಣಿಗಾರಿಕೆ, ಸಮುದ್ರ ಕೊರೆತ, 9/11, ಹಕ್ಕುಪತ್ರ ಸೇರಿದಂತೆ ಕಂದಾಯ ಇಲಾಖೆಯ ಹಲವು ಸಮಸ್ಯೆಗಳಿದ್ದು, ಇವುಗಳನ್ನು ಕಾನೂನನಿ ಚೌಕಟ್ಟಿನಲ್ಲಿ ಬಗೆಹರಿಸಲು ಪ್ರಯತ್ನಿಸುವುದಾಗಿ ಹೇಳಿದರು.

ಪರಿಸರ ಸಂರಕ್ಷಣೆ ಮೇಲೆ ಕೇಂದ್ರೀಕರಿಸಿದ ಸಿಎಸ್‌ಆರ್ ಚಟುವಟಿಕೆಗಳನ್ನು ಕೈಗೊಳ್ಳಲು ಹಲವಾರು ಖಾಸಗಿ ಉದ್ಯಮಿಗಳು ಮುಂದೆ ಬಂದಿದ್ದಾರೆ. ಈ ಪ್ರದೇಶವು ಸೂಕ್ಷ್ಮ ಪರಿಸರ ವಲಯವಾಗಿದೆ ಮತ್ತು ಇಲ್ಲಿ ಕೈಗಾರಿಕಾ ಚಟುವಟಿಕೆಗಳನ್ನು ಇತರ ಸ್ಥಳಗಳಂತೆ ಮುಕ್ತವಾಗಿ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.