ಉಡುಪಿ: ಉಡುಪಿ ಜಿಲ್ಲೆಯ ಪ್ರಸಿದ್ಧ ದೇವಿಯ ಕ್ಷೇತ್ರವಾದ ಕಡಿಯಾಳಿ ಶ್ರೀ ಮಹಿಷ ಮರ್ದಿನಿ ದೇಗುಲದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತಿದೆ.

ದೇಗುಲದ ಉತ್ಸವ ಹಾಗೂ ಸೌರಮಾನ ಯುಗಾದಿಯ ಪ್ರಯುಕ್ತ ವಿಶಿಷ್ಟ ಅಗರಬತ್ತಿ ಒಂದನ್ನು ಇಲ್ಲಿ ಬೆಳಗುವ ಮೂಲಕ ಹಬ್ಬದ ಸಂಭ್ರಮ ಇಮ್ಮಡಿಗೊಳಿಸಲಾಗಿದೆ. ಈ ಊದುಕಡ್ಡಿ ಸತತ 38 ಗಂಟೆಗಳ ಕಾಲ ತನ್ನ ಸುಗಂಧವನ್ನು ದೇಗುಲದ ಆವರಣದಲ್ಲಿ ಪಸರಿಸಲಿದೆ.

ದೇಗುಲ ದರ್ಶನಕ್ಕೆ ಬರುವ ಭಕ್ತರಿಗೆ ಈ ಅಗರಬತ್ತಿ ವಿಶಿಷ್ಟ ಅನುಭವ ನೀಡಲಿದೆ. ಇದೇ ವೇಳೆ ಕಡಿಯಾಳಿ ತೇರಿನ ಪ್ರಯುಕ್ತ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಕಳೆದ ಎರಡು ದಿನಗಳಿಂದ ಅಖಂಡ ಭಜನೆ ಹಗಲು- ರಾತ್ರಿ ನಡೆಯುತ್ತಿದೆ. ಚಂದ್ರಮಂಡಲ ರಥದಲ್ಲಿ ಕಡಿಯಾಳಿ ಮಹಿಷಮರ್ಧಿನಿ ದೇವಿಯ ಉತ್ಸವಮೂರ್ತಿಯನ್ನು ಕುಳ್ಳಿರಿಸಿ ಪ್ರದಕ್ಷಿಣೆ ತರುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಗಿದೆ.