ಉಡುಪಿ: ಯೂ ಟರ್ನ್ ರಾಜ್ಯ ಸರಕಾರದ ವಿರುದ್ದ ಸಾಮಾಜಿಕ ನ್ಯಾಯಕ್ಕಾಗಿ ಡಿ.10ರಿಂದ ಡಿ. 16 ರವರೆಗೆ ಉಡುಪಿಯಿಂದ ಬೆಳಗಾವಿಗೆ ಅಂಬೇಡ್ಕರ್ ಜಾಥ – 2 ನಡೆಯಲಿದೆ ಎಂದು ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್.ಭಾಸ್ಕರ್ ಪ್ರಸಾದ್ ಹೇಳಿದರು.

ಸೋಮವಾರ ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ದಲಿತರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಆರಂಭದಲ್ಲಿ ನೀಡಿದ್ದ ಎಲ್ಲಾ ಭರವಸೆಗಳಿಂದ ಯೂ ಟರ್ನ್ ಹೊಡೆದಿದ್ದು, ಈ ಮಾನಗೇಡಿ, ಅಸಹಾಯಕ, ನಂಬಿಕೆದ್ರೋಹಿ ಸರಕಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಈ ಚಲೋ ಬೆಳಗಾವಿ ಅಂಬೇಡ್ಕರ್ ಜಾಥ – 2 ಅನ್ನು ಆಯೋಜಿಸಲಾಗುತ್ತಿದೆ. ಸರಕಾರವು ದಲಿತರ, ಅಲ್ಪಸಂಖ್ಯಾತರ ಅಭಿವೃದ್ಧಿಗೆ ಮೀಸಲಾಗಿದ್ದ ಅನುದಾನವನ್ನು ತನ್ನ ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಕಾಂತರಾಜ್ ವರದಿ, ಒಳಮೀಸಲಾತಿ, 2 ಬಿ ಮೀಸಲಾತಿಗಳನ್ನು ನೀಡುವುದಾಗಿ ಸ್ವತಃ ಸಿದ್ದರಾಮಯ್ಯ ಅವರೇ ಭರವಸೆ ನೀಡಿದ್ದರು. ವರ್ಷ ಕಳೆದರೂ ಈ ಬೇಡಿಕೆಗಳನ್ನು ಈಡೇರಿಸಿಲ್ಲ. ವಕ್ಫ್ ವಿಷಯದಲ್ಲಿಯೂ ರಾಜ್ಯ ಸರಕಾರವು ಕೋಮುವಾದಿಗಳ ಅಪಪ್ರಚಾರಕ್ಕೆ ಮಣಿದಿದೆ ಈ ಎಲ್ಲಾ ಉದ್ದೇಶಕ್ಕಾಗಿ ಜಾಥವನ್ನು ನಡೆಸಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರ.ಕಾರ್ಯದರ್ಶಿ ಅಫ್ಸರ್ ಕೂಡ್ಲಿಪೇಟೆ, ರಾಜ್ಯ ಕಾರ್ಯದರ್ಶಿಗಳಾದ ರಿಯಾಝ್ ಕಡಂಬು, ರಂಜಾನ್ ಕಡಿವಾಳ್, ಉಡುಪಿ ಜಿಲ್ಲಾಧ್ಯಕ್ಷ ಶಾಹಿದ್ ಅಲಿ ಉಪಸ್ಥಿತರಿದ್ದರು.