ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಉಡುಪಿ ನಗರದಲ್ಲಿ ಹುಲಿವೇಷ ಸೇರಿದಂತೆ ವಿವಿಧ ವೇಷ ತಂಡಗಳ ಅಬ್ಬರ ಜೋರಾಗಿದೆ. ಅದರಲ್ಲೂ ಈ ಬಾರಿ ಯುವತಿಯರ ಹುಲಿವೇಷ ತಂಡಗಳು ವಿಶೇಷ ಸದ್ದು ಮಾಡುತ್ತಿವೆ.
ವಿವಿಧ ಸಂಘಟನೆಗಳು ಹುಲಿವೇಷ ಕುಣಿತದ ಪ್ರದರ್ಶನಕ್ಕೆ ವಿಶೇಷ ಆದ್ಯತೆ ನೀಡಿರುವುದರಿಂದ 50ಕ್ಕೂ ಅಧಿಕ ಹುಲಿವೇಷ ತಂಡಗಳು ನಗರದ ಬೀದಿ ಬೀದಿಗಳಲ್ಲಿ ಘರ್ಜಿಸತೊಡಗಿವೆ.
ಎರಡು ದಿನಗಳ ಕಾಲ ನಗರದೆಲ್ಲೆಡೆ ಕೇಳುತ್ತಿರುವುದು, ಹುಲಿ ತಾಸೆಯ ಸದ್ದು ಮಾತ್ರ. ನಿಟ್ಟೂರು, ಮಲ್ಪೆ ಕಾಡಬೆಟ್ಟು, ಕಡಿಯಾಳಿ, ಮಾರ್ಪಳ್ಳಿ ಚಂಡೆ ಬಳಗ ಮೊದಲಾದ ಹುಲಿವೇಷ ತಂಡಗಳು ಅಷ್ಟಮಿಯ ರಂಗು ಹೆಚ್ಚಿಸುತ್ತಿವೆ. ಜಿಲ್ಲೆಯಾದ್ಯಂತ 100ಕ್ಕೂ ಹೆಚ್ಚು ಹುಲಿವೇಷ ತಂಡಗಳು ಅಷ್ಟಮಿ ಸಂಭ್ರಮದಲ್ಲಿ ಭಾಗವಹಿಸಿವೆ.

