ಉಡುಪಿ: ಆಕಾಶದಲ್ಲಿ ಇಂದು ( ಜ.3)ಅಪರೂಪದ ವಿದ್ಯಮಾನವೊಂದು ನಡೆಯಲಿದ್ದು, ಇವರೆಗೂ ಸಂಭವಿಸದ ಸೂರ್ಯ ಚಂದ್ರರ ಜುಗಲ್ಬಂದಿಯನ್ನು ಕಾಣಬಹುದಾಗಿದೆ. ಇದೇ ಮೊದಲ ಬಾರಿಗೆ ಈ ಖಗೋಳ ವಿಸ್ಮಯ ಉಂಟಾಗಲಿದೆ.

ಇಂದು ಆಕಾಶದಲ್ಲಿ ಹುಣ್ಣಿಮೆ ಮತ್ತು ಸೂಪರ್ ಮೂನ್ ಗೋಚರಿಸಲಿದೆ. ಏಕಕಾಲದಲ್ಲಿ ಚಂದ್ರ ಮತ್ತು ಸೂರ್ಯರ ಗಾತ್ರ ಹಿಗ್ಗುವಿಕೆಯಾಗಲಿದೆ. 14 ಅಂಶದಷ್ಟು ದೊಡ್ಡದಾಗಿ ಚಂದ್ರ ಕಾಣಿಸಲಿದ್ದು, ಹೀಗಾಗಿ 30 ಅಂಶದಷ್ಟು ಹೆಚ್ಚು ಹುಣ್ಣಿಮೆ ಚಂದ್ರನ ಬೆಳದಿಂಗಳನ್ನು ನೋಡಬಹುದಾಗಿದೆ. ಹಾಗೆ, ಸೂರ್ಯನ ವಿಚಾರದಲ್ಲೂ ಇಂದು ವಿಶೇಷ ದಿನ. ಸೂರ್ಯಾಸ್ತದ ವೇಳೆ ಅಪರೂಪದ ವಿದ್ಯಮಾನ ಸಂಭವಿಸಲಿದೆ. ಎಂದಿಗಿಂತ ದೊಡ್ಡದಾಗಿ ಸೂರ್ಯ ಕಂಗೊಳಿಸಲಿದ್ದಾನೆ.

ಸೂಪರ್ ಮೂನ್ ನಿಂದ ಹುಣ್ಣಿಮೆಯ ಚಂದ್ರ ಭೂಮಿಗೆ ಸುಮಾರು 27 ಸಾವಿರ ಕಿಲೋಮೀಟರ್ ಹತ್ತಿರದಲ್ಲಿ ಕಾಣಿಸಲಿದೆ. ಹೀಗಾಗಿ ಸೂಪರ್ ಮೂನ್ ಕಣ್ತುಂಬಿಕೊಳ್ಳುವುದೇ ಒಂದು ಸಂಭ್ರಮ. ಇಂದು ಸೂರ್ಯನ ಸುತ್ತ ತಿರುಗುವ ಭೂಮಿಯ ವೃತ್ತ ದೀರ್ಘ ಆಗಲಿದ್ದು, ಈ ದೀರ್ಘ ವೃತ್ತದ ಕಾರಣದಿಂದ ಸೂರ್ಯ ಭೂಮಿಗೆ ಸಮೀಪ ಬರಲಿದ್ದಾನೆ. ಸೂರ್ಯನ ಸರಾಸರಿ ದೂರ 15 ಕೋಟಿ ಕಿಲೋಮೀಟರ್ ಇರಲಿದೆ.

ಆದರೆ ಶನಿವಾರ 14.70 ಲಕ್ಷ ಕಿಲೋಮೀಟರ್ ಗೆ ಅಂತರ ಇಳಿಕೆಯಾಗಲಿದೆ. ಮಾಮೂಲಿಗಿಂತ ಭೂಮಿಗೆ ಸೂರ್ಯ ಸಮೀಪ ಬರಲಿದ್ದಾನೆ. ಹೀಗಾಗಿ ಮಾಮೂಲಿಗಿಂತ ದೊಡ್ಡದಾಗಿ ಸೂರ್ಯ ಕಂಗೊಳಿಸಲಿದ್ದಾನೆ. ಸೂರ್ಯಾಸ್ತದ ವೇಳೆ ಎತ್ತರ ಪ್ರದೇಶದಲ್ಲಿ ಹೆಚ್ಚಿನ ಗಾತ್ರದ ಸೂರ್ಯ ಹಾಗೂ ಚಂದ್ರೋದಯ ಕಾಣಬಹುದು.

ಸೂರ್ಯನ ಸುತ್ತ ತಿರುಗುವ ಭೂಮಿ ಹಾಗೂ ಭೂಮಿಯ ಸುತ್ತ ತಿರುಗುವ ಚಂದ್ರ ಪಥವು ವರ್ತುಲವಲ್ಲದೆ ದೀರ್ಘ ವೃತ್ತಾಕಾರವಾಗಲಿದೆ. ಇದುವೇ ಈ ಸುಂದರ ಖಗೋಳ ಸೌಂದರ್ಯಕ್ಕೆ ಕಾರಣ. ಬರಿಯ ಕಣ್ಣಿನಲ್ಲಿ ನೋಡಿ ಸಂಭ್ರಮಿಸುವ ವಿದ್ಯಮಾನ ಇದಾಗಿದೆ.