ಉಡುಪಿ: ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿರುವ ಮಲ್ಪೆ ಬೀಚ್ ಪರಿಸರದಲ್ಲಿ ಸ್ವಚ್ಛತೆಯ ಕೊರತೆ ಕಂಡುಬಂದಿದ್ದು, ಕಸದ ರಾಶಿ ಹಾಗೂ ಅಂಗಡಿಗಳ ಹಿಂಭಾಗದಲ್ಲಿ ನಿಂತ ನೀರಿನಿಂದ ಸೊಳ್ಳೆಗಳ ಉತ್ಪತ್ತಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ ಎಂಬ ಆತಂಕ ವ್ಯಕ್ತವಾಗಿದೆ.

ಮಳೆಗಾಲದಲ್ಲಿ ಡೆಂಗ್ಯೂ, ಮಲೇರಿಯಾ ಸೇರಿದಂತೆ ಸೊಳ್ಳೆಗಳಿಂದ ಹರಡುವ ರೋಗಗಳ ಭೀತಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಬೀಚ್ ಪರಿಸರದಲ್ಲಿನ ಅವ್ಯವಸ್ಥೆ ಸಾರ್ವಜನಿಕರ ಗಮನ ಸೆಳೆದಿದೆ. ಅಂಗಡಿಗಳ ಹಿಂಭಾಗದಲ್ಲಿ ಪ್ಲಾಸ್ಟಿಕ್ ಬಕೆಟ್‌ಗಳು, ಬಾಟಲಿಗಳು ಹಾಗೂ ಇತರ ತ್ಯಾಜ್ಯ ವಸ್ತುಗಳಲ್ಲಿ ಮಳೆನೀರು ಸಂಗ್ರಹವಾಗುತ್ತಿದೆ. ಇದರಿಂದ ಸೊಳ್ಳೆಗಳ ಉತ್ಪತ್ತಿಗೆ ಅವಕಾಶವಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಬೀಚ್ ಪರಿಸರದಲ್ಲಿರುವ ನಗರಸಭೆಯ ಕಸದ ತೊಟ್ಟಿಗಳಲ್ಲೂ ಕಸ ತುಂಬಿಕೊಂಡಿದ್ದು, ಸಮರ್ಪಕವಾಗಿ ಕಸ ವಿಲೇವಾರಿ ಆಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಪ್ರದೇಶದಲ್ಲೇ ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗಿರುವುದು ಸ್ವಚ್ಛತೆ ಮತ್ತು ಆರೋಗ್ಯ ಸುರಕ್ಷತೆಯ ಬಗ್ಗೆ ಪ್ರಶ್ನೆ ಮೂಡಿಸಿದೆ.

ಕ್ರಮಕ್ಕೆ ಆಗ್ರಹ: ರೋಗ ಹರಡಿದ ಬಳಿಕ ನಿಯಂತ್ರಣ ಕ್ರಮ ಕೈಗೊಳ್ಳುವುದಕ್ಕಿಂತ ಮುನ್ನವೇ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ಗುರುತಿಸಿ ನಾಶಪಡಿಸುವ ಅಗತ್ಯವಿದೆ. ಅಂಗಡಿ ಮಾಲೀಕರು ತಮ್ಮ ಮಳಿಗೆಗಳ ಹಿಂಭಾಗದಲ್ಲಿ ನೀರು ನಿಲ್ಲದಂತೆ ಕ್ರಮವಹಿಸಬೇಕು. ನಗರಸಭೆಯೂ ನಿಯಮಿತವಾಗಿ ಕಸ ವಿಲೇವಾರಿ ಮಾಡುವುದರ ಜತೆಗೆ ಬೀಚ್ ಪರಿಸರದಲ್ಲಿ ಸ್ವಚ್ಛತಾ ಕಾರ್ಯವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮಲ್ಪೆ ಬೀಚ್‌ನ ಸ್ವಚ್ಛತೆ ಮತ್ತು ಪ್ರವಾಸಿಗರ ಆರೋಗ್ಯದ ದೃಷ್ಟಿಯಿಂದ ಜಿಲ್ಲಾಡಳಿತ ಹಾಗೂ ನಗರಸಭೆ ಶಾಶ್ವತ ಪರಿಹಾರದ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.