ಉಡುಪಿ: ಕಂಬಳ ಕರಾವಳಿ ಭಾಗದ ಜನರ ನೆಚ್ಚಿನ ಕ್ರೀಡೆ. ಶತಮಾನಗಳ ಇತಿಹಾಸ ಇರುವ ಇದು ಕರಾವಳಿ ಜನಗಳ ನೆಚ್ಚಿನ ಕ್ರೀಡೆ, ವೀರ ಕ್ರೀಡೆ. ಮಣ್ಣಿನ ಮಕ್ಕಳ ಪ್ರತಿಷ್ಠೆಯ ಆಚರಣೆ. ಅದರಂತೆ ಬ್ರಹ್ಮಾವರ ತಾಲೂಕಿನ ವಂಡಾರು ಕಂಬಳವು ಕರಾವಳಿಯ ಸಾಂಪ್ರದಾಯಿಕ ಕಂಬಳಗಳ ಪೈಕಿ ಅತೀ ಪುರಾತನ ಹಾಗೂ ಪ್ರಸಿದ್ಧವಾದ ಕಂಬಳ. ಊರಿನ ಹಬ್ಬ, ಜಾತ್ರೆಯ ರೂಪದಲ್ಲಿ ಕಂಬಳ ನಡೆಯುತ್ತದೆ.

ವಂಡಾರು ಕಂಬಳ ಊರ ಜನರ ಧಾರ್ಮಿಕ ಮಹತ್ವ, ಸಾಮೂಹಿಕ ಪಾಲ್ಗೊಳ್ಳುವಿಕೆ, ಮನೆತನದ ಗೌರವದ ಸಂಕೇತ. ಧಾರ್ಮಿಕ ಕಟ್ಟುಕಟ್ಟಳೆಯೊಂದಿಗೆ ಗ್ರಾಮೀಣ ಸೊಗಡನ್ನು ಸಾರುವ, ಜನರ ಜೀವನ, ಸಂಸ್ಕೃತಿಯನ್ನು ಬಿಂಬಿಸುವ ಕಂಬಳ ಇದಾಗಿದೆ. ಕುಂದಾಪುರದಿಂದ ಸುಮಾರು 30 ಕಿ.ಮೀ. ದೂರದ ವಂಡಾರಿನಲ್ಲಿ ನಡೆಯುವ ಈ ಕಂಬಳಕ್ಕೆ ಪುರಾತನ ಹಿನ್ನೆಲೆ ಇದೆ.

ಪಾಂಡವರು ಒಂದು ವರ್ಷದ ಅಜ್ಞಾತವಾಸದ ಸಮಯದಲ್ಲಿ ದಿನಕ್ಕೊಂದು ಒಳ್ಳೆಯ ಕೆಲಸ ಮಾಡಬೇಕು ಅನ್ನುವುದು ಶಿವನ ಆಜ್ಞೆಯಾಗಿರುತ್ತದೆ. ಅದರಂತೆ ಒಂದು ದಿನ ರಾತ್ರಿ 5 ಎಕ್ರೆ ವಿಸ್ತೀರ್ಣದ ಪ್ರದೇಶದಲ್ಲಿ ವಿಶಾಲವಾದ ಕೋಟೇಶ್ವರ ದೇವಸ್ಥಾನದ ಕೋಟಿತೀರ್ಥ ಪುಷ್ಕರಣಿಯನ್ನು ನಿರ್ಮಿಸುತ್ತಾರೆ. ಅದು ಅರ್ಧ ರಾತ್ರಿಗೆ ಮುಗಿಯುತ್ತದೆ. ಅದಕ್ಕೆ ಅಲ್ಲಿಂದ ವಂಡಾರಿಗೆ ಸುರಂಗ ಮಾರ್ಗದ ಮೂಲಕ ನಿಗಳೇಶ್ವರನ ಮೂಲಕ ಬಂದು ಅಲ್ಲಿ 10 ಎಕ್ರೆ ವಿಸ್ತೀರ್ಣದ ಕಂಬಳ ಗದ್ದೆಯನ್ನು ನಿರ್ಮಿಸುತ್ತಾರೆ.

ಹಾಗೆ ಕೆಲಸ ಮಾಡಿ, ಪಾಂಡವರು ಹಲಸಿನ ಹಣ್ಣನ್ನು ಸಿಗಿಯಲು ಹೋದ ವೇಳೆ ಬೆಳಗಾಯಿತೆಂದು ಊರವರಿಗೆ ತಿಳಿಯಬಾರದೆನ್ನುವ ಕಾರಣಕ್ಕೆ ಕೃಷ್ಣನೇ ಕೋಳಿಯ ರೂಪದಲ್ಲಿ ಕೂಗಿದ್ದು, ಇದನ್ನು ತಿಳಿದ ಅವರು, ಗದ್ದೆ ನಿರ್ಮಾಣ ನಿಲ್ಲಿಸಿ, ತೆರಳುತ್ತಾರೆ ಇಂದಿಗೂ ಇದಕ್ಕೆ ಬೇಕಾದ ಪೂರಕ ಸಾಕ್ಷಿಗಳು ಕಂಬಳಗದ್ದೆಯಲ್ಲಿ ಕಾಣಬಹುದಾಗಿದೆ.

ವಂಡಾರಿನ ಕಂಬಳಗದ್ದೆಯು ಇಲ್ಲಿನ ಹೆಗ್ಡೆ ಮನೆತನದ್ದಾಗಿದ್ದು, ಅವರೇ ಶತಮಾನಗಳಿಂದಲೂ ಈ ಹರಕೆಯ ಕಂಬಳ ನಡೆಸಿಕೊಂಡು ಬರುತ್ತಿದ್ದಾರೆ. ಮನೆಯ ದೇವರು ತುಳಸಿ ಅಮ್ಮ. ತಿರುಪತಿಯಿಂದ ಬಂದಿರುವುದಾಗಿ ಪ್ರತೀತಿಯಿದೆ. ಉಡುಪಿ ಜಿಲ್ಲೆಯ ವಿವಿಧೆಡೆಗಳಿಂದ ಇಲ್ಲಿಗೆ ಕೋಣಗಳು ಬರುತ್ತವೆ. ಹಿಂದೆ ನೂರಿನ್ನೂರು ಜೋಡಿ ಕೋಣಗಳು ಬರುತ್ತಿದ್ದವು. ಈಗ 50-60 ಜೋಡಿ ಬರುತ್ತವೆ. ವಾದ್ಯ, ಚೆಂಡೆಯೊಂದಿಗೆ ಕಂಬಳ ಗದ್ದೆಗೆ ಕೋಣಗಳನ್ನು ಕರೆತರಲಾಗುತ್ತದೆ.

ಕೋಣಗಳು ಮಾತ್ರವಲ್ಲದೆ ದನಕರುಗಳಿಗೆ ಅನಾರೋಗ್ಯ, ತೊಂದರೆ ಉಂಟಾಗದಂತೆ ಹರಕೆ ಸಲ್ಲಿಸುವ ಸಂಪ್ರದಾಯವಿದೆ. ಜಾನುವಾರುಗಳನ್ನು ಗದ್ದೆಗೆ ಇಳಿಸಿ, ಸುತ್ತು ಹಾಕಿಸಿ, ಹರಕೆ ಸಲ್ಲಿಸುತ್ತಾರೆ. ಮಕ್ಕಳನ್ನೂ ಗದ್ದೆಗೆ ಇಳಿಸಿ, ನೀರಿನ ಪ್ರೋಕ್ಷಣೆ ಮಾಡುತ್ತಾರೆ. ಕೊಡಿ ಹಬ್ಬದಲ್ಲಿರುವಂತೆ ಕಂಬಳ ದಿನ ಇಲ್ಲಿಗೆ ಬಂದು ಕಂಬಳ ಗದ್ದೆಯಲ್ಲಿ ಸುತ್ತು ಹಾಕಿ ಅಕ್ಕಿ ಹಾಕಿಕೊಂಡು ಹೋಗುವ ಕ್ರಮವೂ ಇದೆ.

ಒಟ್ಟಾರೆಯಾಗಿ,  ವಂಡಾರಿನಲ್ಲಿ ಕಂಬಳ ಕೇವಲ ಮನೋರಂಜನೆ ಮಾತ್ರವಲ್ಲ, ಇದು ಜನರ ನಂಬಿಕೆಯ ಆಚರಣೆ. ಸಾವಿರ ವರ್ಷಗಳ ಇತಿಹಾಸವಿರುವ ಈ ಕಂಬಳ ಇನ್ನಷ್ಟು ಸಹಸ್ರ ವರ್ಷಗಳ ಕಾಲ ನಡೆಯಲಿ ಎನ್ನುವುದೇ ನಮ್ಮ ಆಶಯ.