ಉಡುಪಿ: ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಹೆಬ್ರಿ ತಾಲೂಕಿನ ತಿಂಗಳೆಯ ಗರಡಿಯಲ್ಲಿ ಸಾಹಿತ್ಯ ಆರಾಧನೆ ಮತ್ತು ದೈವರಾಧನೆ ವೈಭವದಿಂದ ನಡೆಯಿತು. ಅಪರೂಪದ ಶಿವರಾಯ ದೈವದ ನೇಮೊತ್ಸವಕ್ಕೆ ಭಕ್ತರ ದಂಡೇ ಹರಿದು ಬಂತು.
ಅರಣ್ಯ ಪ್ರದೇಶದ ನಡುವೆ ಇರುವ ಈ ತಿಂಗಳೆಯ ದೈವ ಸನ್ನಿಧಿಯಲ್ಲಿ ನಡೆದ 64ನೇ ವರ್ಷದ ಸಾಹಿತ್ಯೋತ್ಸವಕ್ಕೆ ಸಾವಂತವಾಡಿಯ ಅರಸರಾದ ರಾಜ ಬಹದ್ದೂರ್ ಕೇಮ್ ಸಾವಂತ್ ಬೋಸ್ಲೆ ಆಗಮಿಸಿದ್ದರು. ತಿಂಗಳೆ ಈ ಉತ್ಸವವು ಧರ್ಮ, ಕಲೆ, ಸಾಹಿತ್ಯ ಉತ್ಸವವಾಗಿದ್ದು, ಸಾವಿರಾರು ಜನ ಈ ಮಹೋತ್ಸವದಲ್ಲಿ ಭಾಗಿಯಾಗಿದ್ದರು.
ಬ್ರಹ್ಮ ಬೈದರ್ಕಳ ನೇಮ ನಡೆಯಿತು. ಶಿವರಾಯ ದೈವದ ನೇಮ ತುಂಬಾ ಅಪರೂಪವಾಗಿದ್ದು, ಹೆಚ್ಚಾಗಿ ಹೆಬ್ರಿ ಚಾರ ಭಾಗಗಳಲ್ಲಿ ಕೆಲವು ಕಡೆ ನಡೆಯುತ್ತದೆ. ಶಿವರಾಯ ದೈವದ ನೇಮೋತ್ಸವ ನೋಡಲು ಉಡುಪಿ ಮಾತ್ರವಲ್ಲದೆ, ರಾಜ್ಯದ ನಾನಾ ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದರು. ಒಂದು ಕಾಲದಲ್ಲಿ ತಿಂಗಳೆಯು ಅರಮನೆಯ ಆಳ್ವಿಕೆಗೆ ಒಳಪಟ್ಟ ಮನೆತನವಾಗಿತ್ತು.

ಋಷಿ ಶೃಂಗ ಮಹರ್ಷಿಗಳು ತಪಸ್ಸು ಮತ್ತು ಯಜ್ಞ ಯಾಗಾದಿಗಳನ್ನು ತಿಂಗಳೆಯಲ್ಲಿ ಮಾಡುತ್ತಿದ್ದರು. ತಮ್ಮ ಮತ್ತು ಯಜ್ಞದ ರಕ್ಷಣೆಗೆ ಬೇಕಾಗಿ ಶಿವರಾಯ ದೈವವನ್ನು ಅಭಿಮಂತ್ರಿಸಿದ ದೈವ ಶಿವರಾಯ ದೈವ. ಋಷಿ ಶೃಂಗ ಮಹರ್ಷಿಗಳು ತಿಂಗಳೆಯ ಭಾಗದ ಜನರ ರಕ್ಷಣೆಗೆ ಬೇಕಾಗಿ ಶಿವರಾಯ ದೈವವನ್ನು ತಿಂಗಳೆಯಲ್ಲಿ ಪ್ರತಿಷ್ಟಾಪಿಸಿದ್ದಾರೆ ಎನ್ನುವುದು ಪ್ರತೀತಿ.
ತಿಂಗಳೆಯಲ್ಲಿ ಶಿವರಾಯ ದೈವವನ್ನು ಉಗ್ರ ರೂಪಿಯಾಗಿ ಆರಾಧನೆ ಮಾಡಿದರು ದೈವದ ರೂಪದಲ್ಲಿ ಪೂಜೆಯನ್ನು ಸಲ್ಲಿಸಲಾಗುತ್ತಿದೆ. ಶಿವರಾಯ ದೈವವು ಕೂಡ ತನ್ನನ್ನು ಬೇಡಿ ಬಂದ ಭಕ್ತರ ಸಂಕಷ್ಟಗಳನ್ನು ದೂರ ಮಾಡುತ್ತದೆ ಎಂಬ ನಂಬಿಕೆಯು ಕರಾವಳಿಯ ಜನರದ್ದಾಗಿದೆ.

ತಿಂಗಳೆಯ ಶಿವರಾಯ ದೈವವು ಸುತ್ತಮುತ್ತಲಿನ 16 ಮಾಗಣೆಗೆ ಸಂಬಂಧಪಟ್ಟ ದೈವವಾಗಿದೆ.ಋಷ್ಯ ಶೃಂಗ, ಕಿಗ್ಗಕ್ಕು ತಿಂಗಳೆಗೂ ಭಾವನಾತ್ಮಕ ಸಂಬಂಧವಿದೆ. ಶಿವರಾಯ ಮತ್ತು ಬೆರ್ಮೆರ್ ಬೈದೇರುಗಳ ಭೇಟಿಯು ಕ್ಷಣವನ್ನು ಭಕ್ತ ಜನಕಣ್ತುಂಬಿಕೊಂಡರು. ನೇಮೊತ್ಸವ, ಸಾಯಿತ್ಯ ಸಂಭ್ರಮದ ನಡುವೆ ಯಕ್ಷ ಗುರು ಬನ್ನಂಜೆ ಸಂಜೀವ ಸುವರ್ಣ ಅವರ ನಿರ್ದೇಶನದಲ್ಲಿ ಚಕ್ರವ್ಯೂಹ ಯಕ್ಷಗಾನ ಗಮನ ಸೆಳೆಯಿತು.

