ಕೋಟ: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕಾರು ಢಿಕ್ಕಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸಾಸ್ತಾನ ಜಂಕ್ಷನ್ ಬಳಿ ಸಂಭವಿಸಿದೆ.

ಮೃತರನ್ನು ಸಾಸ್ತಾನ ನಿವಾಸಿ ಗಣೇಶ್ ಕರ್ಕೇರ ಎಂದು ಗುರುತಿಸಲಾಗಿದೆ. ಈತ ಮೀನುಗಾರಿಕೆ ಕೆಲಸ ನಿರ್ವಹಿಸುತ್ತಿದ್ದು ತಡರಾತ್ರಿ ಸಾಸ್ತಾನ ಜಂಕ್ಷನ್‌ನಲ್ಲಿ ಉಡುಪಿ-ಕುಂದಾಪುರ ರಸ್ತೆಯನ್ನು ದಾಟಿ, ಪಶ್ಚಿಮ ದಿಕ್ಕಿನ ರಸ್ತೆಯನ್ನು ದಾಟಲು ಡಿವೈಡರ್‌ನ ಅಂಚಿನಲ್ಲಿ ನಿಂತಿದ್ದರು.

ಈ ವೇಳೆ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಅಜಾಗರೂಕತೆಯಿಂದ ಬಂದ ಕಾರು ಅವರಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ಗಣೇಶ್ ಕರ್ಕೇರ ಅವರು ಸ್ವಲ್ಪ ದೂರು ಕಾರಿನೊಂದಿಗೆ ಎಳೆದೊಯ್ಯಲ್ಪಟ್ಟಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.