ಉಡುಪಿ: ಕಾಶ್ಮೀರ ಪ್ರವಾಸದಲ್ಲಿರುವ ಉಡುಪಿಯ 20 ಮಂದಿ ಬ್ರಹ್ಮಾವರ ಕುಂದಾಪುರ ಭಾಗದಿಂದ ತೆರಳಿರುವ ಪ್ರವಾಸಿಗರು ನಿನ್ನೆ ಪೆಹೆಲ್ಗಾವ್ ಗೆ ಹೋಗಬೇಕಾಗಿತ್ತು. ಸದ್ಯ ತಂಡದ ಎಲ್ಲಾ ಸದಸ್ಯರು ಸೇಫ್ ಆಗಿದ್ದಾರೆ.
ಶ್ರೀನಗರದ ಆಸು ಪಾಸು ಪ್ರವಾಸ ಮುಂದುವರಿಸಿದ್ದಾರೆ. ಎಲ್ಲಿ ನೋಡಿದರೂ ಬಿಗಿ ಭದ್ರತೆ ಇದೆ. ಸೇಫ್ ಅನಿಸುವ ಜಾಗದಲ್ಲಿ ಪ್ರವಾಸ ನಡೆಸುತ್ತೇವೆ. ಪ್ರತಿ ಹೆಜ್ಜೆ ಹೆಜ್ಜೆಗೂ ಸೈನಿಕರನ್ನು ನಿಯೋಜಿಸಲಾಗಿದೆ. ಕುಂದಾಪುರ, ಬ್ರಹ್ಮಾವರ ಭಾಗದಿಂದ ಪ್ಯಾಕೇಜ್ ಟೂರ್ ನಲ್ಲಿ ಬಂದಿದ್ದೇವೆ.

ಘಟನೆ ನಡೆದ ಸ್ಥಳದಿಂದ ನಾವು ಸಾಕಷ್ಟು ದೂರ ಇದ್ದೇವೆ. ನಮ್ಮ ಪ್ರವಾಸೋದ್ಯಮ ಎಲ್ಲ ನಷ್ಟವಾಯ್ತು ಎಂದು ಸ್ಥಳೀಯ ರು ಹೇಳ್ತಿದಾರೆ. ಬಂದ್ ವಾತಾವರಣ ಇದೆ, ಕೆಲವೆಡೆ ಪ್ರತಿಭಟನೆ ನಡೆಯುತ್ತಿದೆ. ಪ್ರವಾಸ ಯಾವ ರೀತಿ ಮುಂದುವರಿಯುತ್ತೆ ಗೊತ್ತಿಲ್ಲ. ಶನಿವಾರದವರೆಗೂ ಇಲ್ಲೇ ಇರಲು ಉದ್ದೇಶಿಸಿದ್ದೆವೆ ಎಂದು ತಂಡದ ಸದಸ್ಯ ಭಿರ್ತಿ ರಾಜೇಶ ಶೆಟ್ಟಿ ಮಾಹಿತಿ ನೀಡಿದ್ದಾರೆ.
ಎ.21ರಂದು ನಾವು ಕಾಶ್ಮೀರಕ್ಕೆ ಬಂದಿದ್ದೇವೆ. ನಮ್ಮದು 20 ಜನರ ತಂಡ. ನಿನ್ನೆ ಕಾಶ್ಮೀರ ಶ್ರೀನಗರದಲ್ಲಿ ವಿವಿಧ ಕಡೆ ತಿರುಗಾಟ ನಡೆಸಿದ್ದೇವೆ ಇವತ್ತು ನಾವು ಪೆಹಲ್ಗಾವ್ ಗೆ ಹೋಗಬೇಕಾಗಿತ್ತು. ಈ ದುರ್ಘಟನೆ ನಡೆದ ಕಾರಣ ಪ್ರವಾಸ ರದ್ದಾಗಿದೆ. ಈಗ ನಾವು ಸೋನಾ ಮಾರ್ಗ್ ಗೆ ಹೋಗುತ್ತಿದ್ದೇವೆ. ಸೋನಾ ಮಾರ್ಗ ಗುಲ್ ಮಾರ್ಗ್ ಗೆ ನಮ್ಮ ಪ್ರವಾಸ ಇದೆ.

ಶನಿವಾರ ಶ್ರೀನಗರಕ್ಕೆ ವಾಪಸ್ ಬಂದು ಉಡುಪಿಗೆ ವಾಪಸ್ ಆಗುತ್ತೇವೆ. ಓಡಾಡಿದ ಸ್ಥಳದಲ್ಲೆಲ್ಲಾ ಭದ್ರತೆ ಕಾಣುತ್ತಿದ್ದೇವೆ. ನಾವು 20 ಮಂದಿ ಅತ್ಯಂತ ಸುರಕ್ಷಿತವಾಗಿದ್ದೇವೆ, ಘಟನೆ ನಡೆದ ಸ್ಥಳದಿಂದ ಸುಮಾರು 150 km ದೂರ ಇದ್ದೇವೆ ಎಂದರು.

