ತುಮಕೂರು : ಸಿಲಿಂಡರ್ ಸ್ಫೋಟಗೊಂಡು ಮನೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ತುಮಕೂರು ಜಿಲ್ಲೆ ಸಿರಾ ತಾಲ್ಲೂಕಿನ ಬಂದಕುಂಟೆ ಗ್ರಾಮದ ಗೊಲ್ಲರಹಟ್ಟಿಯಲ್ಲಿ ನಡೆದಿದೆ.

ಗೊಲ್ಲರಹಟ್ಟಿ ಗ್ರಾಮದ ವಾಸಿ ಮೂಡ್ಲಪ್ಪಗೆ ಸೇರಿದ ಮನೆ ಸುಟ್ಟು ಕರಕಲಾಗಿದ್ದು, ಮನೆ ಕಳೆದುಕೊಂಡ ಮೂಡ್ಲಪ್ಪಗೆ ಕುಟುಂಬ ದುಃಖದಲ್ಲಿ ಮುಳುಗಿದೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ.

ಮನೆಯವರೆಲ್ಲರೂ ದೇವರ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಹೋಗಿದ್ದರು. ಈ ವೇಳೆ ಸಿಲಿಂಡರ್ ಸ್ಪೋಟಗೊಂಡು ಅವಘಡ ಸಂಭವಿಸಿದೆ. ಸ್ಫೋಟದ ರಭಸಕ್ಕೆ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಇಡೀ ಮನೆಯನ್ನೇ ಆವರಿಸಿಕೊಂಡಿದೆ. ತಕ್ಷಣ ಸ್ಥಳೀಯರು ಧಾವಿಸಿ ಬೆಂಕಿ ನಂದಿಸಲು ಮುಂದಾಗಿದ್ದಾರೆ. ಆದರೆ, ಬೆಂಕಿ ಹೆಚ್ಚಾದ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದ ನೆರವಿನೊಂದಿಗೆ ಬೆಂಕಿಯನ್ನು ನಂದಿಸಿದ್ದಾರೆ.

ಮನೆಗೆ ಬೆಂಕಿ ಬಿದ್ದಿರುವ ಬಗ್ಗೆ ಪಕ್ಕದ ಮನೆಯವರು ವಿಷಯ ತಿಳಿಸಿದ್ದಾರೆ. ಬಂದು ನೋಡುವಷ್ಟರಲ್ಲಿ ಇಡೀ ಮನೆಯೇ ಸುಟ್ಟು ಭಸ್ಮವಾಗಿತ್ತು. ಮನೆಯಲ್ಲಿನ 1ಲಕ್ಷ 50 ಸಾವಿರ ನಗದು, ಚಿನ್ನಾಭರಣ, ಆಹಾರ ಧಾನ್ಯ, ಟಿವಿ ಸೇರಿದಂತೆ ಎಲ್ಲಾ ಭಸ್ಮವಾಗಿವೆ. ಇದರಿಂದಾಗಿ ಇಡೀ ಕುಟುಂಬವೇ ಬೀದಿಗೆ ಬಿದ್ದಂತಾಗಿದ್ದು ಸರಕಾರದ ನೆರವಿನ ಮೊರೆ ಹೋಗುತ್ತಿದ್ದಾರೆ.

ಕಳೆದ ರಾತ್ರಿ ಘಟನೆ ನಡೆದಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ. ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ. ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.