ತುಮಕೂರು: ಜಮೀನು‌ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ತುಮಕೂರು‌ ಜಿಲ್ಲೆಯ ತುರುವೇಕೆರೆ ತಾಲೂಕಿನ ಸೊಂಡೆಮಾರ್ಗೋನಹಳ್ಳಿಯಲ್ಲಿ ನಡೆದಿದೆ.

ಶಶಿಕುಮಾರ್, ಲಕ್ಷ್ಮಣಯ್ಯ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ನಾಗೇಗೌಡನಪಾಳ್ಯದ ಮಂಜುನಾಥ್ ಎಂಬಾತನ ತಾಯಿ, ಪತ್ನಿ ಹಾಗೂ ಗಂಗಮ್ಮ, ನಾಗಯ್ಯ ಎಂಬುವವರು ಹಲ್ಲೆ ನಡೆಸಿದ್ದಾರೆ.

ಲಕ್ಷ್ಮಣಯ್ಯಗೆ ಸೇರಿದ ಸರ್ವೇ ನಂ.26ರ ಜಮೀನಿನ‌ ವಿಚಾರಕ್ಕೆ ಗಲಾಟೆ ನಡೆದಿದೆ. 1 ಎಕರೆ 10 ಗುಂಟೆಗೆ ಪಹಣಿ ಇದ್ದು, ಸರ್ವೆ ನಂ.26 ರಲ್ಲಿ ಇರುವ 15 ಗುಂಟೆ ಕರಾಬಿನ ವಿಚಾರಕ್ಕೆ ಮಾರಾಮಾರಿ ನಡೆದಿದೆ. ಈಗಾಗಲೇ 15 ಗುಂಟೆ ಕರಾಬು ಜಾಗದಲ್ಲಿ ಲಕ್ಷ್ಮಣಯ್ಯ ಉಳುಮೆ ಮಾಡಿಕೊಂಡಿದ್ದಾರೆ.

15 ಗುಂಟೆ ಕರಾಬು ನಮಗೆ ಸೇರಬೇಕೆಂದು ಪಕ್ಕದ ಜಮೀನಿನ ಮಂಜುನಾಥ ಕುಟುಂಬಸ್ಥರಿಂದ ಲಕ್ಷ್ಮಣಯ್ಯ ಮೇಲೆ ಹಲ್ಲೆ ನಡೆಸಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಜಗಳಕ್ಕೆ ಬಂದ ಮಂಜುನಾಥ್‌ ಕುಟುಂಬಸ್ಥರು, ಲಕ್ಷ್ಮಣಯ್ಯನನ್ನು ಹಿಡಿದು ನೀರಿನಲ್ಲಿ ಮುಳುಗಿಸಿ, ಕುಡುಗೋಲು ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ.

ಹಲ್ಲೆಯಿಂದ ಲಕ್ಷ್ಮಣಯ್ಯಗೆ ಗಂಭೀರ ಗಾಯಗೊಂಡಿದ್ದು, ತುರುವೇಕೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.