ತುಮಕೂರು : ದಲಿತ ಮಹಿಳೆಗೆ ದೇವಾಲಯ ಪ್ರವೇಶ ಹಾಗೂ ಪೂಜೆ ಮಾಡಲು ನಿರಾಕರಿಸಿದ ಆರೋಪದಡಿ ಅರ್ಚಕನನ್ನು ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ತಿಗಳರಪಾಳ್ಯದಲ್ಲಿ ನಡೆದಿದೆ.
ಗ್ರಾಮದ ಮೂಡಲಗಿರಿ ವೆಂಕಟೇಶ್ವರ ದೇವಸ್ಥಾನಕ್ಕೆ ತೆರಳಿದ್ದ ರೋಜಾ ಎಂಬುವವರಿಗೆ ಪ್ರವೇಶ ನಿರಾಕರಿಸಲಾಗಿದೆ ಎನ್ನಲಾಗಿದೆ. ಮಾರಮ್ಮ ದೇವಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಗ್ರಾಮಕ್ಕೆ ಬಂದಿದ್ದ ರೋಜಾ, ದೇವಾಲಯಕ್ಕೆ ಹೋಗಿದ್ದಾಗ ಅವರನ್ನು ತಡೆಯಲಾಗಿದೆ.
ನೀನು ಕೆಳ ಜಾತಿಯವಳು, ನಮ್ಮ ದೇವಸ್ಥಾನಕ್ಕೆ ಯಾಕೆ ಬಂದಿದ್ದೀಯಾ? ಎಂದು ದೇವಸ್ಥಾನದ ಪೂಜಾರಿ ಹನುಮಯ್ಯ ನಿಂದಿಸಿದ್ದಾರೆ ಎಂಬ ಆರೋಪಿಸಲಾಗಿದೆ. ಪೂಜೆ ಮಾಡಲು ಅವಕಾಶ ನೀಡದೆ ಅವಮಾನ ಮಾಡಿದ್ದಾರೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂಬಂಧ ಫೆಬ್ರವರಿ 23ರಂದು ಅಮೃತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

