ತುಮಕೂರು: ಗೌರಿಬಿದನೂರಿನಿಂದ ಮಧುಗಿರಿ ಕಡೆಗೆ ಸಂಚರಿಸುತ್ತಿದ್ದ ಕ್ಯಾಂಟರ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ಶಾಲೆಯ ಕಾಂಪೌಂಡ್‌ಗೆ ನುಗ್ಗಿದ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಭೈರೇನಹಳ್ಳಿ ಕ್ರಾಸ್‌ನಲ್ಲಿ ತಡರಾತ್ರಿ ಸಂಭವಿಸಿದೆ.
ಅದೃಷ್ಟವಶಾತ್ ಚಾಲಕ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾನೆ. ತಡರಾತ್ರಿ ಅಪಘಾತ ನಡೆದಿರುವುದರಿಂದ ಶಾಲಾ ಆವರಣದಲ್ಲಿ ಯಾರೂ ಇಲ್ಲದ ಕಾರಣ ದೊಡ್ಡ ಮಟ್ಟದ ಅನಾಹುತವೊಂದು ತಪ್ಪಿದಂತಾಗಿದೆ. ಈ ಭೈರೇನಹಳ್ಳಿ ಕ್ರಾಸ್ ಇತ್ತೀಚಿನ ದಿನಗಳಲ್ಲಿ ಸರಣಿ ಅಪಘಾತಗಳ ತಾಣವಾಗಿ ಮಾರ್ಪಡುತ್ತಿರುವುದು ಸ್ಥಳೀಯರಲ್ಲಿ ಭೀತಿ ಮೂಡಿಸಿದೆ.
ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಅವೈಜ್ಞಾನಿಕ ರಸ್ತೆ ಕಾಮಗಾರಿಯೇ ಈ ಎಲ್ಲಾ ಅನಾಹುತಗಳಿಗೆ ಮುಖ್ಯ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ರಸ್ತೆ ತಿರುವುಗಳು ಮತ್ತು ಸಿಗ್ನಲ್‌ಗಳನ್ನು ಸಮರ್ಪಕವಾಗಿ ನಿರ್ಮಿಸದ ಕಾರಣ ಚಾಲಕರಿಗೆ ರಸ್ತೆ ಸರಿಯಾಗಿ ಅಂದಾಜಿಗೆ ಸಿಗುತ್ತಿಲ್ಲ. ಅಧಿಕಾರಿಗಳ ಇಂತಹ ಬೇಜವಾಬ್ದಾರಿತನದಿಂದಾಗಿ ಭೈರೇನಹಳ್ಳಿ ಕ್ರಾಸ್ ಈಗ ‘ಡೆತ್ ಸ್ಪಾಟ್’ ಆಗಿ ಬದಲಾಗಿದೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

