ತುಮಕೂರು: 12ನೇ ಶತಮಾನದಲ್ಲಿ ಬಸವಣ್ಣನವರು ಸಮಾನತೆಯ ಸಂದೇಶ ನೀಡಿದರೆ, ಕೆಂಪೇಗೌಡರು ಸರ್ವ ಜನಾಂಗಗಳನ್ನು ಒಗ್ಗೂಡಿಸಿ ನಾಡು ಕಟ್ಟಿದರು. ಸಮಾನತೆಯ ಸಮಾಜ ನಿರ್ಮಾಣಕ್ಕೆ ಅಂಬೇಡ್ಕರ್ ಚಿಂತನೆ ಅಗತ್ಯ ಎಂದು ರಾಜ್ಯಸಭಾ ಸದಸ್ಯ ಹಾಗೂ ಖ್ಯಾತ ಚಲನಚಿತ್ರ ನಟ ಜಗ್ಗೇಶ್ ಅಭಿಪ್ರಾಯಪಟ್ಟರು.

ನಗರದ ಕನ್ನಡ ಭವನದಲ್ಲಿ ಏ.4 ಶನಿವಾರ ಸಂಜೆ ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಸಹಿತಂ ಪ್ರಕಾರ ಹಾಗೂ ಸ್ವರಾಷ್ಟ್ರ ಪ್ರಕಾಶನದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಲೇಖಕ ಸುಧಾಕರ್ ಹೊಸಳ್ಳಿ ಅವರ “ನಾನೂ ಕಾಫಿರ” ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಇಂದಿನ ದಿನಗಳಲ್ಲಿ ಪುಸ್ತಕ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ. ಇಂತಹ ಮೌಲ್ಯಯುತ ಕೃತಿಗಳು ಸಮಾಜದಲ್ಲಿ ಹೊಸ ಚಿಂತನೆ ಮೂಡಿಸಬೇಕೆಂದರೆ ಇವುಗಳನ್ನು ಈ-ಬುಕ್ ರೂಪದಲ್ಲಿ ಹೊರತರಬೇಕು. ಇದರಿಂದ ಯುವ ಪೀಳಿಗೆಗೆ ವಿಷಯಗಳನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.

ಕೃತಿಯ ಲೇಖಕ ಹಾಗೂ ಸಂವಿಧಾನ ತಜ್ಞ ಡಾ.ಸುಧಾಕರ್ ಹೊಸಳ್ಳಿ ಮಾತನಾಡಿ ಪುಸ್ತಕ ಕೇವಲ ಅಕ್ಷರಗಳ ಗುಂಪಲ್ಲ, ಅದು ಮಾನವನ ಉಸಿರಿನೊಂದಿಗೆ ಸಂಬಂಧ ಹೊಂದಿದೆ. ಮಹಾನ್ ವ್ಯಕ್ತಿಗಳ ಚಿಂತನೆಗಳನ್ನು ಮರೆಮಾಚುವ ಪ್ರಯತ್ನ ನಡೆದಾಗ, ಪುಸ್ತಕಗಳು ಆ ಮೌಲ್ಯಗಳನ್ನು ಜನರಿಗೆ ತಲುಪಿಸುವ ಕೊಂಡಿಯಾಗುತ್ತವೆ. ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮಂತ್ರವೇ ಅಸಮಾನತೆಯನ್ನು ಹೋಗಲಾಡಿಸಲು ಇರುವ ಏಕೈಕ ದಾರಿ ಎಂದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಮಕ್ಕಳ ತಜ್ಞ ಹಾಗೂ ಸಮಾಜ ಸೇವಕ ಡಾ. ಲಕ್ಷ್ಮೀಕಾಂತ್ ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಈ ದೇಶದ ಕೇವಲ ಒಬ್ಬ ವ್ಯಕ್ತಿಯಲ್ಲ, ಅವರು ಒಂದು ಶಕ್ತಿ. ಅವರ ನ್ಯಾಯ ಮತ್ತು ಸಮಾನತೆಯ ಆಶಯಗಳನ್ನು ಲೇಖಕರು ಈ ಪುಸ್ತಕದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.

ಅಧ್ಯಕ್ಷೀಯ ನುಡಿಗಳನ್ನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಅವರು ಇಂದಿನ ಸಮಾಜದಲ್ಲಿ ಮೌಲ್ಯಗಳ ಕುಸಿತ ಮತ್ತು ವಿಭಜನೆ ಆತಂಕಕಾರಿಯಾಗಿದೆ. ಅಂಬೇಡ್ಕರ್ ಪ್ರತಿಪಾದಿಸಿದ ಸಾಮಾಜಿಕ ನ್ಯಾಯ ಪಾಲಿಸಿದರೆ ಮಾತ್ರ ಶಾಂತಿ ಮತ್ತು ಪ್ರಗತಿ ಸಾಧ್ಯ. ಇಂತಹ ಯುವ ಲೇಖಕರನ್ನು ಪ್ರೋತ್ಸಾಹಿಸುವುದು ಸದೃಢ ಸಮಾಜದ ನಿರ್ಮಾಣಕ್ಕೆ ಪೂರಕ ಎಂದು ಹೇಳಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತುಮಕೂರು ಜಿಲ್ಲಾ ಸಮಿತಿ ಅಧ್ಯಕ್ಷರಾದ ಡಾ. ಸಿಬಂತಿ ಪದ್ಮನಾಭ ಕೆ.ವಿ ಸ್ವಾಗತಿಸಿದರು. ಅರ್ಪಿತಾ ಕೆ. ಸಿ.ಕಾರ್ಯಕ್ರಮ ನಿರೂಪಿಸಿದರೆ, ಬಿ.ಎಸ್. ಮಂಜುನಾಥ್ ವಂದಿಸಿದರು. ಜಿಲ್ಲೆಯ ಸಾಹಿತ್ಯಾಸಕ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.