ತುಮಕೂರು: ಬೀಗರೂಟ ಸೇವಿಸಿದ್ದ 24 ಜನರು ವಾಂತಿ, ಭೇದಿಯಿಂದ ಅಸ್ವಸ್ಥಗೊಂಡಿರುವ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಶ್ರೀರಂಗಪುರ ತಾಂಡಾದಲ್ಲಿ ನಡೆದಿದೆ. ಕಳ್ಳಬಟ್ಟಿ ಸೇವಿಸಿ ಈ ರೀತಿ ಆಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಅಸ್ವಸ್ಥಗೊಂಡವರು ಸ್ಥಳೀಯ ಆಸ್ಪತ್ರೆ ಹಾಗೂ ಬೆಂಗಳೂರು, ಪಾವಗಡ, ಹಿಂದೂಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಗಸ್ಟ್ 16ರಂದು ಶ್ರೀರಂಗಪುರ ತಾಂಡಾದಲ್ಲಿ ಬೀಗರ ಊಟ ಆಯೋಜಿಸಲಾಗಿತ್ತು. ಊಟ ಮಾಡಿ ವಾಪಸ್ ತೆರಳಿದ ನಾಗೇನಹಳ್ಳಿ ತಾಂಡಾದ ಜನರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ.ಅಸ್ವಸ್ಥಗೊಂಡವರು ಹೊಟ್ಟೆ ನೋವು, ಭೇದಿಯಾಗಿ ಶುಕ್ರವಾರ ರಾತ್ರಿ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು, ಪಾವಗಡ, ಹಿಂದೂಪುರದಲ್ಲಿ ತಲಾ ಒಬ್ಬರಂತೆ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾಗೇನಹಳ್ಳಿ ತಾಂಡಾಗೆ ಉಪವಿಭಾಗಧಿಕಾರಿ ತಹಶೀಲ್ದಾರ್, ಇಓ, ಟಿಹೆಚ್ಒ ಸೇರಿದಂತೆ ಹಲವು ಅಧಿಕಾರಿಗಳ ತಂಡ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದದೆ. ಸದ್ಯ ಕಾರ್ಯಕ್ರಮದಲ್ಲಿ ನೀಡಿದ ನೀರು, ಊಟದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

