ಹೈದ್ರಬಾದ್: ತೆಲಂಗಾಣದ ಸಿರ್ಸಿಲ್ಲಾದಲ್ಲಿ ನವಿಲು ಮಾಂಸವನ್ನು ತಯಾರಿಸಿ ಸೇವಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಭಾನುವಾರ ವ್ಯಕ್ತಿಯನ್ನು ಬಂಧಿಸಲಾಗಿದೆ. ಯೂಟ್ಯೂಬರ್ ಕೋಡಂ ಪ್ರಣಯ್ ಕುಮಾರ್ ಅಕ್ರಮ ವನ್ಯಜೀವಿ ಬಳಕೆಯನ್ನು ಉತ್ತೇಜಿಸುತ್ತಿದ್ದಾರೆ ಎಂದು ಆರೋಪಿಸಿ ಬಂಧಿಸಲಾಗಿದೆ.
ಹೌದು. . ಯೂಟ್ಯೂಬ್ ನಲ್ಲಿ ಲೈಕ್ಸ್ ಹುಚ್ಚಿಗಾಗಿ ಯೂಟ್ಯೂಬರ್ ಕೋಡಂ ಪ್ರಣಯ್ ಕುಮಾರ್ ಸಾಂಪ್ರದಾಯಿಕ ರೀತಿಯಲ್ಲಿ ನವಿಲು ಸಾಂಬಾರ್ ಮಾಡುವುದು ಹೇಗೆ ಎಂಬ ಪಾಕವಿಧಾನವನ್ನು ತನ್ನ ಯೂಟ್ಯೂಬ್ ಚಾನಲ್ನಲ್ಲಿ ಅಪ್‌ಲೋಡ್ ಮಾಡಿದ್ದ. ಅಷ್ಟೇ ಅಲ್ಲ, ಥಂಬ್ನೈಲ್ನಲ್ಲಿ ನವಿಲು ಚಿತ್ರವನ್ನು ಹಾಕಿ ಅಪ್‌ಲೋಡ್ ಮಾಡಿದ್ದ.
ಈ ವಿಡಿಯೋ ನೋಡಿದ ನೆಟ್ಟಿಗರು ಕೋಡಂ ಪ್ರಣಯ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದರು. ಯಾವಾಗ ಭಾರಿ ವಿರೋಧ ವ್ಯಕ್ತವಾಗಿದೆ ಎಂಬ ಗೊತ್ತಾಯಿತೋ ತಕ್ಷಣ ವಿಡಿಯೋವನ್ನು ಯೂಟ್ಯೂಬ್ನಿಂದ ಪ್ರಣಯ್ ಡಿಲೀಟ್ ಮಾಡಿದ್ದಾರೆ. ಆದರೂ ಅಷ್ಟರಲ್ಲೇ ಈ ವಿಷಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿದಿದೆ. ಇದೀಗ ಪ್ರಣಯ್ ನನ್ನು ವಶಕ್ಕೆ ಪಡೆದು ಆತನಿಂದ ನವಿಲು ಗರಿ ಹಾಗೂ ಸಾಂಬರ್ ಅನ್ನು ವಶಪಡಿಸಿಕೊಂಡಿದ್ದಾರೆ.
ಸದ್ಯ ವಶಕ್ಕೆ ಪಡೆದಿರುವುದನ್ನು ಅಧಿಕಾರಿಗಳು ಲ್ಯಾಬ್‌ಗೆ ಕಳುಹಿಸಿದ್ದಾರೆ. ಒಂದು ವೇಳೆ ಅದು ನವಿಲು ಖಾದ್ಯ ಎಂಬುದು ಕಂಡುಬಂದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

