ಜೈಪುರ: ವ್ಯಕ್ತಿಯೊಬ್ಬ ನಾಯಿಯನ್ನು ಬೈಕ್‌ಗೆ ಹಗ್ಗ ಹಾಗೂ ಸರಪಳಿಯಿಂದ ಕಟ್ಟಿ ದರದರನೆ ಎಳೆದುಕೊಂಡು ಹೋಗಿರುವಂತಹ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವ್ಯಕ್ತಿ ತನ್ನ ಬೈಕ್‌ಗೆ ನಾಯಿಯನ್ನು ಸರಪಳಿ ಹಾಗೂ ಹಗ್ಗದಿಂದ ಕಟ್ಟಿ, ಒರಟಾದ ರಸ್ತೆಯಲ್ಲಿ ಬಲವಂತವಾಗಿ ಎಳೆದುಕೊಂಡು ಹೋಗಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಬೈಕ್ ಓಡಿಸುತ್ತಿದ್ದಾಗ ಮಹಿಳೆಯೊಬ್ಬರು ಮಧ್ಯಪ್ರದೇಶಿಸಿ ಬೈಕ್ ಅನ್ನು ನಿಲ್ಲಿಸಿ ಕೃತ್ಯ ಎಸಗುತ್ತಿದ್ದ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ.
ವಿಡಿಯೋದಲ್ಲಿ ಅಸಹಾಯಕ ಮೂಕ ಪ್ರಾಣಿ ರಸ್ತೆಯಲ್ಲಿ ಕುಳಿತಿರುವುದು ಹಾಗೂ ಗಾಯದಿಂದಾಗ ಅಲ್ಲಲ್ಲಿ ರಕ್ತದ ಕಲೆಗಳಾಗಿರುವುದು ಕಾಣಿಸಿಕೊಂಡಿದೆ. ನಾಯಿಯನ್ನು ಎಳೆದುಕೊಂಡು ಹೋದ ವ್ಯಕ್ತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಹಿಳೆ, ನಿಮಗೆ ತಲೆ ಕೆಟ್ಟಿದೆಯೇ? ನೀವು ಮನುಷ್ಯರಾ ಇಲ್ಲದೇ ಪ್ರಾಣಿಯೇ? ಎಂದು ಕೋಪದಿಂದ ಕೇಳುವುದು ಕಂಡುಬಂದಿದೆ.
ಇದೇ ಸಂದರ್ಭ ಮತ್ತೊಬ್ಬ ವ್ಯಕ್ತಿ ಘಟನೆಗಳನ್ನು ತನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾನೆ ಮಾತ್ರವಲ್ಲದೇ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ಈ ಘಟನೆ ಉದಯಪುರದ ಬಲಿಚಾ ಪ್ರದೇಶದಲ್ಲಿ ನಡೆದಿದೆ. ಸ್ಥಳೀಯರು ಈ ಅಮಾನವೀಯ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ.

