ಪಿತ್ತೋರ್​ಗಢ: ಪಿತ್ತೋರ್​ಗಢ ಜಿಲ್ಲೆಯಲ್ಲಿರುವ ಓಂ ಪರ್ವತ ಪ್ರವಾಸಿಗರ ನೆಚ್ಚಿನ ತಾಣ. ಪ್ರತಿಕಾಲದಲ್ಲಿಯೂ ತನ್ನ ನೆತ್ತಿಯ ಮೇಲೆ ಹಿಮ ಹೊದ್ದುಕೊಂಡೇ ಇರುತ್ತೆ. ಆದ್ರೆ ಈಗ ಇತಿಹಾಸದಲ್ಲಿಯೇ ಮೊದಲ ಬಾರಿ ಓಂ ಪರ್ವತದಿಂದ ಮಂಜು ಕಾಣೆಯಾಗಿದೆ. ಪರ್ವತದ ಮೇಲೆ ನಿಚ್ಚಳವಾಗಿ ಕಾಣುತ್ತಿದ್ದ ಹಿಂದಿಯ ಓಂಕಾರ ಬರಹ ಕಾಣಿಸದೆ ಪ್ರವಾಸಿಗರು ಕಂಗಾಲಾಗಿದ್ದಾರೆ.

ಹವಾಮಾನ ತಜ್ಞರು ಹೇಳುವ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಹಿಮಾಲಯದ ಮೇಲೆ ಬಿದ್ದ ಕಡಿಮೆ ಮಳೆ ಬೆಟ್ಟಗಳ ಮೇಲೆ ಬೀಳುವ ಹಿಮವನ್ನು ಚದುರಿಸಿಕೊಂಡು ಹೋಗಿದೆ, ಇದೇ ಕಾರಣದಿಂದಾಗಿ ಈ ಬಾರಿ ಮೊದಲ ಬಾರಿಗೆ ಓಂ ಪರ್ವತದಲ್ಲಿ ಹಿಮ ಬಿದ್ದಿಲ್ಲ. ಅದು ಮಾತ್ರವಲ್ಲ, ಸದ್ಯ ವಾಹನಗಳಿಂದ ಹಾಗೂ ಇತರೇ ಮೂಲಗಳಿಂದ ಆಗುತ್ತಿರುವ ವಾಯುಮಾಲಿನ್ಯ ಹಾಗೂ ಜಾಗತಿಕ ತಾಪಮಾನವೂ ಕೂಡ ಇದಕ್ಕೆ ಕಾರಣ ಎನ್ನುತ್ತಿದ್ದಾರೆ. ಒಂದು ವೇಳೆ ಓಂ ಪರ್ವತ ಹೀಗೆ ಹಿಮರಹಿತವಾಗಿ, ಬೋಳು ಬೋಳಾಗಿಯೇ ಉಳಿದುಕೊಂಡ್ರೆ ಪ್ರವಾಸೋದ್ಯಮದ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.

ಸಮುದ್ರಮಟ್ಟದಿಂದ 14 ಸಾವಿರ ಅಡಿ ಎತ್ತರದಲ್ಲಿರುವ ಈ ಓಂ ಪರ್ವತ ಮೇಲೆ ಪ್ರಕೃತಿ ಎರಚುತ್ತಿದ್ದ ಹಿಮ ಹಿಂದಿಯ ಓಂ ಅಕ್ಷರವನ್ನು ತೋರಿಸುತ್ತಿತ್ತು. ಅದನ್ನು ನೋಡಲೆಂದೇ ಲಕ್ಷ ಲಕ್ಷ ಪ್ರವಾಸಿಗರು ಈ ಕಡೆಗೆ ಪ್ರತಿವರ್ಷ ಹರಿದು ಬರುತ್ತಿದ್ದರು. ಆದ್ರೆ ಈ ಬಾರಿ ಪ್ರವಾಸಕ್ಕೆ ಬಂದವರು ಹಿಮ ಗೀಚುವ ಓಂಕಾರ ಕಾಣದೇ ಸಪ್ಪೆ ಮೋರೆಯಲ್ಲಿ ವಾಪಸ್ ಹೋಗುತ್ತಿದ್ದಾರೆ.