ಯಾದಗಿರಿ: ಬಸ್ ನಿಲ್ದಾಣದಲ್ಲಿ ಬಸವಣ್ಣನ ಫೋಟೋ ತೆಗೆದು ಕ್ರೈಸ್ತನ ಫೋಟೋ ಹಾಕುವಂತೆ ಕ್ರಿಶ್ಚಿಯನ್ ಅನುಯಾಯಿ ಒಬ್ಬ ಕಿರಿಕ್ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ಬಸ್ ನಿಲ್ದಾಣದಲ್ಲಿ ನಡೆದಿದೆ.
ವಿಶ್ವಗುರು ಬಸವಣ್ಣನಿಗೆ ಅವಹೇಳನಕಾರಿಯಾಗಿ ಮಾತನಾಡಿದ ಅನಾಮಧೇಯ ವ್ಯಕ್ತಿ, ಬಸ್ ನಿಲ್ದಾಣದಲ್ಲಿ ಸಿಬ್ಬಂದಿಯೊಂದಿಗೆ ಅನುಚಿತ ವರ್ತನೆ ಮಾಡಿದ್ದಾನೆ. ಕ್ರೈಸ್ತ ಧರ್ಮದವರಿಗೆ ಅನ್ಯಾಯವಾಗಿದೆ. ಪಾರ್ಸಿಯಾಲಿಟಿ ಮಾಡುತ್ತಿದ್ದೀರಿ ನೀವು, ಬಸವಣ್ಣನ ಫೋಟೋ ಯಾಕೆ ಹಾಕಿದ್ದೀರಾ? ಎಲ್ಲಾ ಬಸ್‌ಗಳಲ್ಲಿ ಜೀಸಸ್ ಫೋಟೋ ಹಾಕಬೇಕು ಎಂದು ಕಿರಿಕ್ ಮಾಡಿದ್ದಾನೆ.
ಬಸವಕಲ್ಯಾಣ ತೆಗೆದು ಎಲ್ಲಾ ಬಸ್ಸುಗಳ ಮೇಲೆ ಕ್ರೈಸ್ತ ಕಲ್ಯಾಣ ಅಂತಾ ಮಾಡುತ್ತೇನೆ. ಕ್ರೈಸ್ತ ಮೊದಲು ಬಂದಿದ್ದಾನೆ. ಬಸವಣ್ಣ ಆಮೇಲೆ ಬಂದಿದ್ದಾನೆ ಎಂದು ಸಿಬ್ಬಂದಿ ಮೇಲೆ ರೇಗಾಡಿದ್ದಾನೆ. 12ನೇ ಶತಮಾನದಲ್ಲಿ ಬಸವಣ್ಣ ಬಂದಿದ್ದಾನೆ. ಅದಕ್ಕಿಂತಲೂ ಮುಂಚಿತವಾಗಿ ಕ್ರಿಸ್ತ ಶಕದಲ್ಲಿ ಕ್ರೈಸ್ತ ಇದ್ದ ಎಂದು ರಂಪಾಟ ನಡೆಸಿದ್ದಾನೆ.
ಬಸ್ ನಿಲ್ದಾಣದಲ್ಲೇ ರಂಪಾಟ ಮಾಡುವ ವೇಳೆ ಸಾರ್ವಜನಿಕರು ವಿಡಿಯೋ ಮಾಡಿಕೊಂಡಿದ್ದು, ಇದೀಗ ವಿಡಿಯೋ ವೈರಲ್ ಆಗಿದೆ. ಅನಾಮಧೇಯ ವ್ಯಕ್ತಿಯ ವಿರುದ್ಧ ಕ್ರಮಕ್ಕಾಗಿ ಜನ ಆಗ್ರಹಿಸಿದ್ದಾರೆ.

