ಇಂದೋರ್: ಮಧ್ಯಪ್ರದೇಶದ ಇಂದೋರ್‌ನಲ್ಲಿ ಭಾರೀ ಮಳೆಯ ಕಾರಣ ಅಲ್ಲಲ್ಲಿ ರಸ್ತೆ ಹಾಳಾಗಿತ್ತು. ಅದನ್ನು ರಿಪೇರಿ ಮಾಡದೇ ರಸ್ತೆ ಪ್ರಾಧಿಕಾರ ಕೂಡ ನಿರ್ಲಕ್ಷ್ಯ ತೋರಿತ್ತು. ಇದು ಬಾಲಕಿಯೊಬ್ಬಳ ಜೀವವನ್ನೇ ಅಪಾಯದಂಚಿಗೆ ದೂಡಿದ ಸನ್ನಿವೇಶ ಸೃಷ್ಟಿಯಾಗಿತ್ತು.
ಇಂದೋರ್‌ನ ಅಮ್ಮರ್ ನಗರದಲ್ಲಿ ರಸ್ತೆ ದಾಟಲು ಪ್ರಯತ್ನಿಸುವಾಗ ಹನ್ನೆರಡು ವರ್ಷದ ಬಾಲಕಿಯೊಬ್ಬಳು 4 ಅಡಿ ಆಳದ ನೀರಿನ ಗುಂಡಿಗೆ ಬಿದ್ದಿದ್ದಾಳೆ. ನಂತರ ನೀರಿನಲ್ಲಿ ಒದ್ದಾಡುತ್ತಿದ್ದ ಬಾಲಕಿಯನ್ನು ಅಲ್ಲಿಗೆ ಬಂದ ಹುಡುಗನೊಬ್ಬ ಕಾಪಾಡಿದ್ದಾನೆ. ಈ ವಿಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬಾಲಕಿ ಅಜ್ಜಿಯ ಜೊತೆಗೆ ರಸ್ತೆ ದಾಟಲು ಮುಂದಾಗಿದ್ದಾಳೆ. ಅಜ್ಜಿ ಮುಂದೆ ಹೋಗಿದ್ದು, ಹಿಂದಿನಿಂದ ಬಂದ ಹುಡುಗಿ ರಸ್ತೆಯಲ್ಲಿ ಸಣ್ಣ ಹೊಂಡವೆಂದು ನೀರಿಗೆ ಕಾಲಿಡಲು ಪ್ರಯತ್ನಿಸಿದ್ದಾಳೆ. ಆಗ ಬ್ಯಾಲೆನ್ಸ್ ತಪ್ಪಿ ಬಾಲಕಿ 4 ಅಡಿ ಆಳದ ನೀರಿನ ಗುಂಡಿಗೆ ಬಿದ್ದಿದ್ದಾಳೆ.
ಆಕೆ ಮುಳುಗಿ ನಂತರ ಸಮತೋಲನ ಮಾಡಿ ಗುಂಡಿಯ ಬದಿಗೆ ಬಂದಿದ್ದಾಳೆ. ಆಕೆ ಗುಂಡಿಯಿಂದ ಹೊರಗೆ ಬರಲು ಹೆಣಗಾಡುತ್ತಿರುವಾಗ ಅಲ್ಲಿಗೆ ಬಂದ ಹುಡುಗನೊಬ್ಬ ಆಕೆಯನ್ನು ಮೇಲಕ್ಕೆ ಎತ್ತಿದ್ದಾನೆ. ಇದರಿಂದ ಆಕೆಯ ಜೀವ ಉಳಿದಿದೆ.
ಮಾಹಿತಿಯ ಪ್ರಕಾರ, ನಿರ್ಮಾಣ ಕಾರ್ಯಕ್ಕಾಗಿ ರಸ್ತೆ ಪ್ರಾಧಿಕಾರದ ಅಧಿಕಾರಿಗಳು ಗುಂಡಿಯನ್ನು ಅಗೆದಿದ್ದರು ಆದರೆ ಅದನ್ನು ಮುಚ್ಚದೆ ಹಾಗೇ ಬಿಟ್ಟಿದ್ದರು. ಅದು ಮಳೆಯ ಸಮಯದಲ್ಲಿ ತುಂಬಿದ್ದರಿಂದ ಈ ಘಟನೆ ಸಂಭವಿಸಿದೆ.
ಇಡೀ ಘಟನೆಯನ್ನು ಅಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಅದು ಬುಧವಾರ ವೈರಲ್ ಆಗಿದೆ. ಆದರೆ ಈ ಘಟನೆಯ ಬಗ್ಗೆ ಯಾವುದೇ ಮಾಹಿತಿ ಅಥವಾ ದೂರು ದಾಖಲಾಗಿಲ್ಲ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

