ಪಶ್ಚಿಮ ಬಂಗಾಳ: ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್ ಅನ್ನು ಅಲ್ಲಿನ ಹತ್ತಿರದ ಕೆರೆಗೆ ಬಿಸಾಕಿದ ದುಷ್ಕೃತ್ಯ ಜಯನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಪಶ್ಚಿಮ ಬಂಗಾಳದ ಕುಲ್ತಾಲಿಯಲ್ಲಿನ ಮತಗಟ್ಟೆ ಸಂಖ್ಯೆ 40 ಮತ್ತು 41 ರಲ್ಲಿ ನಡೆದಿದೆ.
ಕುಲ್ತಾಲಿಯಲ್ಲಿ, ಕೋಪಗೊಂಡ ಜನಸಮೂಹವು ಕೆಲವು ಮತಗಟ್ಟೆ ಏಜೆಂಟರನ್ನು ಬೂತ್‌ಗಳಿಗೆ ಪ್ರವೇಶಿಸದಂತೆ ನಿರ್ಬಂಧಿಸಿದ್ದು, ನಂತರ ಮತಗಟ್ಟೆಗಳಿಗೆ ಬಲವಂತವಾಗಿ ನುಗ್ಗಿ, ಎಲೆಕ್ಟ್ರಾನಿಕ್ ಮತಯಂತ್ರವನ್ನು (ಇವಿಎಂ) ವಶಪಡಿಸಿಕೊಂಡು ಹತ್ತಿರದ ಕೊಳಕ್ಕೆ ಎಸೆದಿದ್ದಾರೆ. ಸದ್ಯ ಎಲೆಕ್ಟ್ರಾನಿಕ್ ಮತಯಂತ್ರವನ್ನು ಕೊಳಕ್ಕೆ ಎಸೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಪಶ್ಚಿಮ ಬಂಗಾಳದ ಚುನಾವಣಾ ಆಯೋಗವು ಈ ಘಟನೆಯ ಬಗ್ಗೆ ತಕ್ಷಣವೇ ಪ್ರತಿಕ್ರಿಯಿಸಿದ್ದು, ಘಟನೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಯಾವುದೇ ಅಡೆತಡೆಯಿಲ್ಲದೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಹೊಸ ಇವಿಎಂಗಳು ಮತ್ತು ದಾಖಲೆಗಳನ್ನು ಸೆಕ್ಟರ್ ಅಧಿಕಾರಿಗೆ ನೀಡಲಾಗಿದೆ.
ಭಾರತದ ಚುನಾವಣಾ ಆಯೋಗದ ಪ್ರಕಾರ, ಸರಿಸುಮಾರು 5.24 ಕೋಟಿ ಪುರುಷರು, 4.82 ಕೋಟಿ ಮಹಿಳೆಯರು ಮತ್ತು 3574 ತೃತೀಯ ಲಿಂಗ ಮತದಾರರು ಸೇರಿದಂತೆ 10.06 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸುವ ನಿರೀಕ್ಷೆಯಿದೆ. ಬಿಹಾರ, ಹಿಮಾಚಲ ಪ್ರದೇಶ, ಜಾರ್ಖಂಡ್, ಒಡಿಶಾ, ಪಂಜಾಬ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಚಂಡೀಗಢ ಕೇಂದ್ರಾಡಳಿತ ಪ್ರದೇಶ ಸೇರಿದಂತೆ ಏಳು ರಾಜ್ಯಗಳಲ್ಲಿ ಮತದಾನ ನಡೆಯಲಿದೆ. ಒಡಿಶಾ ರಾಜ್ಯ ವಿಧಾನಸಭೆಯ ಉಳಿದ 42 ವಿಧಾನಸಭಾ ಕ್ಷೇತ್ರಗಳಿಗೂ ಏಕಕಾಲದಲ್ಲಿ ಮತದಾನ ನಡೆಯಲಿದೆ.
28 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು 486 ಸಂಸದೀಯ ಕ್ಷೇತ್ರಗಳಿಗೆ ಮತದಾನ ಸುಗಮವಾಗಿ ಮತ್ತು ಶಾಂತಿಯುತವಾಗಿ ಪೂರ್ಣಗೊಂಡಿದೆ ಎಂದು ಇಸಿಐ ತಿಳಿಸಿದೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.

